ಪಾವೂರು ಗ್ರಾಮ ಸಭೆ: ಹಕ್ಕುಪತ್ರ, ಬಿಪಿಎಲ್ ಕಾರ್ಡುಗಳಿಗೆ ಆದ್ಯತೆ ನೀಡಲು ಸಲಹೆ
ಕೊಣಾಜೆ, ಜು. 3: ಪಾವೂರು ಗ್ರಾಮ ಪಂಚಾಯತ್ 2017-18ನೆ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಸೋಮವಾರ ನಡೆದಿದ್ದು, ಸಭೆಯಲ್ಲಿ ಮಾತನಾಡಿದ ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು ಅವರು, 94 ಸಿಸಿಯಡಿ ಬಡವರಿಗೆ ಹಕ್ಕುಪತ್ರ ವಿತರಣೆ ಮತ್ತು ಬಿಪಿಎಲ್ ಕಾರ್ಡುಗಳಿಗೆ ಇದ್ದ ಅಡ್ಡಿ ಸರ್ಕಾರ ದೂರಗೊಳಿಸಿರುವುದರಿಂದ ಇವೆರೆಡೂ ವಿಷಯಗಳಿಗೆ ಪ್ರಥಮ ಆದ್ಯತೆ ನೀಡಿ ಅಧಿಕರಿ ವರ್ಗ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಪಾವೂರು ಗ್ರಾಮದಲ್ಲಿ 94ಸಿಸಿಯಡಿ ಹಕ್ಕುಪತ್ರಕ್ಕೆ 300 ಅರ್ಜಿಗಳು ಬಂದಿದ್ದು 40 ಅರ್ಜಿಗಳನ್ನು ಮಾತ್ರ ಪರಿಶೀಲಿಸಲಾಗಿದ್ದು, ಉಳಿದ ಅರ್ಜಿಗಳನ್ನು ತಕ್ಷಣ ಪರಿಶೀಲನೆ ನಡೆಸಬೇಕು, ಹಕ್ಕುಪತ್ರಕ್ಕೆ ಎಸ್ಸಿಎಸ್ಟಿ ಮನೆಗೆ 2,500 ಹಾಗೂ ಇತರರಿಗೆ 5000 ಶುಲ್ಕ ನಿಗದಿಪಡಿಸಲಾಗಿದೆ. ಬಿಪಿಎಲ್ ಕಾರ್ಡುಗಳಿಗೆ 173 ಅರ್ಜಿಗಳು ಬಂದಿವೆ. ಇವೆರೆಡೂ ವಿಚಾರಗಳು ಬಡವರಿಗೆ ಸಂಬಂಧಪಟ್ಟಿದ್ದಾಗಿರುವುದರಿಂದ ಅಧಿಕಾರಿಗಳು ತಕ್ಷಣ ವಿಲೇವಾರಿ ಮಾಡಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಭಾರತಿ ಪಟಾಗಾರ ಮಾತನಾಡಿ, ಈಗಾಗಲೇ ಅಂಗನವಾಡಿಗಳಲ್ಲಿ ಬುಧವಾರ ಮತ್ತು ಶನಿವಾರ ಮೊಟ್ಟೆ ಭಾಗ್ಯ ಆರಂಭಿಸಲಾಗಿದ್ದು, ಕ್ಷೀರಭಾಗ್ಯದಡಿ ವಾರಕ್ಕೆ ಐದು ದಿನ ಹಾಲು ನೀಡಲಾಗುವುದು. ಮಾತೃತ್ವ ಯೋಜನೆಯಡಿ ಆರು ಸಾವಿರ ರೂಪಾಯಿ ನೀಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿದ್ದರೂ ಇಲಾಖೆಗೆ ಮಾಹಿತಿ ಬಂದಿಲ್ಲ. ಎಲ್ಲಾ ಯೋಜನೆಯ ಹಣ ನೇರವಾಗಿ ಖಾತೆಗೆ ವರ್ಗಾವನೆಯಾಗುವುದರಿಂದ ಆಧಾರ್ ಜೋಡಣೆ ಅನಿವಾರ್ಯ ಎಂದರು.
ಕೃಷಿ ಇಲಾಖೆಯ ರೇಖಾ ಮಾತನಾಡಿ, 10 ಸೆಂಟ್ಸ್‌ನಿಂದ 2 ಎಕರೆ ಜಮೀನು ಇರುವ ಆಸಕ್ತರಿಗೆ ಇಲಾಖೆಯಿಂದ ಉಚಿತವಾಗಿ ಕಾಳು ಮೆಣಸು ಗಿಡಗಳನ್ನು ವಿತರಿಸಲಾಗುವುದು, ಇವುಗಳಿಗೆ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿದಲ್ಲಿ 15 ದಿನಗಳಿಗೊಮ್ಮೆ ತಾನೇ ಪಂಚಾಯಿತಿಗೆ ಬಂದು ಅರ್ಜಿ ಕೊಂಡೊಯ್ಯುತ್ತೇನೆ ಎಂದರು.
ತನಿಖೆ ನಡೆಯಲಿ: ತಾಲೂಕು ಜನಜಾಗೃತಿ ಸಮಿತಿ ಸದಸ್ಯ ಮಹಮ್ಮದ್ ಮಾತನಾಡಿ, ಪಾವೂರು ಗ್ರಾಮದಲ್ಲಿ ಲಾರಿಗಳು, ಒಂದಕ್ಕಿಂತ ಹೆಚ್ಚು ಮನೆ ಹೊಂದಿದವರು, ವಿದೇಶದಲ್ಲಿರುವವರಿಗೆ ಬಿಪಿಎಲ್ ಕಾರ್ಡುಗಳಿದ್ದು, ಒಂದೂವರೆ ಸೆಂಟ್ಸ್ ಜಮೀನಿನಲ್ಲಿ ಮನೆ ಹೊಂದಿರುವವರಿಗೆ ಎಪಿಎಲ್ ಕಾರ್ಡುಗಳಿವೆ. ಮನೆ ಬಿಟ್ಟು ಹೋದವರೂ ಬಿಪಿಎಲ್ ಫಲಾನುಭವಿಗಳಾಗಿದ್ದಾರೆ. ಕಡು ಬಡವರ 125 ಬಿಪಿಎಲ್ ಕಾರ್ಡಗಳು ರದ್ದಾಗಿವೆ. ಈ ಹಿನ್ನೆಲೆಯಲ್ಲಿ 2010ರಿಂದ 2017ರವರೆಗಿನ ಬಿಪಿಎಲ್ ಕಾರ್ಡುಗಳ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದ್ ಫಿರೋಝ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಗೀತಾ ಶಾನುಭೋಗ್ ನೊಡೆಲ್ ಅಧಿಕಾರಿಯಾಗಿದ್ದರು. ಕೊಣಾಜೆ ಠಾಣೆಯ ಎಸ್.ಐ ಸುಕುಮಾರ್, ಮೆಸ್ಕಾಂನ ಕಿರಿಯ ಅಭಿಯಂತರ ವಿನೋದ್ ಕುಮಾರ್, ಪಶು ವೈದ್ಯೆ ರೇಖಾ, ಗ್ರಾಮಕರಣಿಕ ಉಗ್ರಪ್ಪ, ಜಿ.ಪಂ. ಗ್ರಾಮೀಣಾಭಿವೃದ್ಧಿ ಇಂಜಿನಿಯರ್ ನಿತಿನ್, ಸಮಾಜ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖೆ ಮೊದಲಾದವರು ಭಾಗವಹಿಸಿದ್ದರು.
ಪ್ರಭಾರ ಪಿಡಿಒ ನವೀನ್ ಹೆಗ್ಡೆ ಹಾಗೂ ನೂತನ ಕಾರ್ಯದರ್ಶಿ ಪೂವಪ್ಪ ಶೆಟ್ಟಿ ಅವರನ್ನು ಪಂಚಾಯಿತಿಗೆ ಬರಮಾಡಿಕೊಳ್ಳಲಾಯಿತು. ಪಿಡಿಓ ರಜನಿ ಸ್ವಾಗತಿಸಿದರು. ಸಿಬ್ಬಂದಿ ಚಿತ್ರಾ ಶೆಟ್ಟಿ ಹಿಂದಿನ ಗ್ರಾಮಸಭೆಯ ನಡಾವಳಿ ವಾಚಿಸಿದರು.