ವೈನ್‌ಶಾಪ್ ವಿರುದ್ಧ ನಾಗರಿಕರಿಂದ ಮೌನ ಮೆರವಣಿಗೆ
ಉಳ್ಳಾಲ, ಜು.3: ಆರಾಧನಾಲಯಗಳು, ಶಿಕ್ಷಣ ಸಂಸ್ಥೆಗಳಿರುವ ಚೆಂಬುಗಡ್ಡೆ ಪ್ರದೇಶದಲ್ಲಿ ವೈನ್‌ಶಾಪ್‌ಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಚೆಂಬುಗುಡ್ಡೆ ನಾಗರಿಕರಿಂದ ಸೋಮವಾರ ಮೌನ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಚೆಂಬುಗುಡ್ಡೆಯ ನೂರುಲ್ ಹುದಾ ಜುಮಾ ಮಸೀದಿ ಅಧ್ಯಕ್ಷ ಹನೀಫ್, ಸೌಹಾರ್ದತೆಯ ವಾತಾವರಣವನ್ನು ಹಾಳುಮಾಡಲು ಪ್ರಯತ್ನಿಸಬೇಡಿ. ಬಾರ್ ಮತ್ತು ವೈನ್ ಶಾಪ್‌ಗೆ ಅನುಮತಿ ನೀಡಬಾರದು. ಒಂದು ವೇಳೆ ನೀಡಿದ್ದಲ್ಲಿ ಉಳ್ಳಾಲ ನಗರಸಭೆ ಕಚೇರಿ ಎದುರು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಜುಮಾ ಮಸೀದಿ ಕಾರ್ಯದರ್ಶಿ ಮುಹಮ್ಮದ್ ಸಲಾಂ ಮಾತನಾಡಿ, ಮಸೀದಿಯ ಮೂರು ಮೀಟರ್ ವ್ಯಾಪ್ತಿಯಲ್ಲಿ ವೈನ್ ಶಾಪ್‌ಗೆ ಜಾಗ ಗುರುತಿಸಿರುವುದು ಖಂಡನೀಯ. ರಸ್ತೆಯುದ್ದಕ್ಕೂ ಧಾರ್ಮಿಕ ಕೇಂದ್ರಗಳು, ಶೈಕ್ಷಣಿಕ ಸಂಸ್ಥೆಗಳು ಕಾರ್ಯಾಚರಿಸುತ್ತಿವೆ. ಈ ಕುರಿತು ಕಮಿಷನರ್, ಜಿಲ್ಲಾಧಿಕಾರಿ, ನಗರಸಭೆ ಅಧ್ಯಕ್ಷರು, ಅಬಕಾರಿ ಇಲಾಖೆಗೆ ದೂರು ಸಲ್ಲಿಸಲಾಗಿದೆ. ಆದರೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಮೌನ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು.
ನಗರಸಭೆಯಿಂದ ವೈನ್‌ಶಾಪ್‌ಗಳಿಗೆ ಬೆಂಬಲವಿಲ್ಲ: ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಿ ಮೋನು, ವಾರದ ಹಿಂದೆ ಅರ್ಜಿ ಕೈ ಸೇರಿದೆ. ಚೆಂಬುಗುಡ್ಡೆಯಂತಹ ಪ್ರದೇಶದಲ್ಲಿ ವೈನ್ ಶಾಪ್‌ಗೆ ನಗರಸಭೆಯಿಂದ ಯಾವುದೇ ಬೆಂಬಲವಿಲ್ಲ. ವೈನ್‌ಶಾಪ್‌ಗೆ ನಗರಸಭೆಯಿಂದ ಅನುಮತಿ ನೀಡುವುದಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುತ್ತೇವೆ ಎಂದರು.
ನಗರಸಭೆ ಸದಸ್ಯರಾದ ಬಾಝಿಲ್ ಡಿಸೋಜ, ಭಾರತಿ, ಆದಂ, ಫಾರೂಕ್ ಚೆಂಬುಗುಡ್ಡೆ, ಎಂ.ಸಿ. ಖಾದರ್ ಚೆಂಬುಗುಡ್ಡೆ, ಯು.ಕೆ. ಬಾವ ಪಿಲಾರ್, ಇಮ್ತಿಯಾಝ್, ಹನೀಫ್ ದಾರಂದಬಾಗಿಲು, ಸಜ್ಜಾದ್ ಚೆಂಬುಗುಡ್ಡೆ, ಅಶ್ರಫ್, ಜೆರಿ ಮೊಂತೇರೊ ಚೆಂಬುಗುಡ್ಡೆ, ಅಂತೊನಿ ಡಿ.ಸೋಜ ಚೆಂಬುಗುಡ್ಡೆ, ನಾಗೇಶ್ ಕೆರೆಬೈಲು, ಗಣೇಶ್, ನಾಗೇಶ್, ಸುರೇಶ್ , ಅಶ್ರಫ್, ಸತೀಶ್, ಕೆರೆಬೈಲು ಅಝರ್, ನೌಷಾದ್, ತೌಸೀಫ್ ಮೊದಲಾದವರು ಉಪಸ್ಥಿತರಿದ್ದರು.