×
Ad

ಉದ್ಯಮಿಯ ಬ್ಯಾಗ್ ಕಿತ್ತು ಪರಾರಿ : ಇಬ್ಬರು ಆರೋಪಿಗಳ ಬಂಧನ

Update: 2017-07-03 21:12 IST

ಪುತ್ತೂರು, ಜು. 3: ವಿಳಾಸ ಕೇಳುವ ನೆಪದಲ್ಲಿ ಉದ್ಯಮಿಯೊಬ್ಬರ ಬಳಿಗೆ ಬಂದು ಅವರ ಗಮನವನ್ನು ಬೇರೆಡೆ ಸೆಳೆದು 3ಲಕ್ಷ ರೂ. ನಗದು ಹಣವಿದ್ದ ಹ್ಯಾಂಡ್ ಬ್ಯಾಗನ್ನು ಎಗರಿಸಿಕೊಂಡು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ನಗರದ ಹೊರವಲಯದ ಕಬಕ ಗ್ರಾಮದ ಮುರ ನಿವಾಸಿ ಮನೀಷ್ (19) ಮತ್ತು ಬಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ನಿವಾಸಿ ವಿಖ್ಯಾತ್ ಯಾನೆ ವಿಕ್ಕಿ (21) ಬಂಧಿತ ಆರೋಪಿಗಳು.

ಕಳೆದ ಜೂ. 22ರಂದು ರಾತ್ರಿ ಪುತ್ತೂರು ನಗರದ ಹೊರವಲಯದ ಮಂಜಲ್ಪಡ್ಪು ಎಂಬಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿ ಈ ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ.

ಪುತ್ತೂರಿನ ನೆಹರುನಗರ ಸಮೀಪದ ಮಂಜಲ್ಪಡ್ಪು ಎಂಬಲ್ಲಿರುವ ಮಂಗಳಾ ಸ್ಟೋರ್ಸ್‌ನ ಪಾಲುದಾರರಾದ ಪಡ್ನೂರು ಗ್ರಾಮದ ನೆಲಪ್ಪಾಲು ನಿವಾಸಿ ಸುದರ್ಶನ್ ನಾಯಕ್ ಕಳೆದ ಜೂ. 22ರಂದು ರಾತ್ರಿ ಸಂಸ್ಥೆಯ ವ್ಯವಹಾರ ಮುಗಿಸಿ ದಿನದ ಸಂಗ್ರಹ ಮೊತ್ತವನ್ನು ಸಂಸ್ಥೆಯ ಇನ್ನೊಬ್ಬ ಬಂಡವಾಳ ಪಾಲುದಾರರಾದ ಅಕ್ಷಯ್ ಎಸ್.ಕೆ ಮಂಜಲ್ಪಡ್ಪು ಎಂಬವರ ಮನೆಗೆ ತಲುಪಿಸಲು ಆಕ್ಟೀವಾ ಹೋಂಡಾದಲ್ಲಿ ಅಲ್ಲಿಗೆ ತೆರಳಿದ್ದರು. ಅವರ ಮನೆಯಂಗಳ ಸಮೀಪ ಆಕ್ಟೀವಾ ನಿಲ್ಲಿಸಿ ನಗದು ಇದ್ದ ಹ್ಯಾಂಡ್ ಬ್ಯಾಗನ್ನು ಕೈಯಲ್ಲಿ ಹಿಡಿದುಕೊಂಡು ಸುದರ್ಶನ್ ಅವರು ಅಕ್ಷಯ್ ಅವರ ಮನೆಗೆ ಹೋಗುತ್ತಿದ್ದಂತೆ ಮನೆಯಂಗಳದ ಗೇಟ್‌ನ ಎದುರಿಗೆ ಸ್ಕೂಟರೊಂದರಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ವಿಳಾಸ ಕೇಳುವ ನೆಪದಲ್ಲಿ ಸುದರ್ಶನ್ ಅವರ ಜೊತೆಗೆ ಮಾತಿಗಿಳಿದು ಅವರ ಗಮನ ಬೇರೆಡೆ ಸೆಳೆದು ಅವರ ಕೈಯಲ್ಲಿದ್ದ ಹ್ಯಾಂಡ್ ಬ್ಯಾಗ್‌ನ್ನು ಕಸಿದುಕೊಂಡು ಪರಾರಿಯಾಗಿದ್ದರು.

ಈ ಬಗ್ಗೆ ತನಿಖೆ ನಡೆಸಿದ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News