ವಿದ್ಯಾರ್ಥಿಗಳಿಗಾಗಿ ಪುಸ್ತಕ ಬರೆಯಲಿರುವ ಪ್ರಧಾನಿ ಮೋದಿ

Update: 2017-07-03 16:18 GMT

ಹೊಸದಿಲ್ಲಿ,ಜು.3: ಪ್ರಧಾನಿ ನರೇಂದ್ರ ಮೋದಿ ಅವರು ಯುವ ವಿದ್ಯಾರ್ಥಿಗಳಿಗಾಗಿ ಪುಸ್ತಕವೊಂದನ್ನು ರಚಿಸಲಿದ್ದಾರೆ. ಅದರಲ್ಲಿ ಪರೀಕ್ಷೆಯ ಒತ್ತಡದಿಂದ ಪಾರಾಗುವುದು ಹೇಗೆ, ಸಮಾಧಾನಚಿತ್ತರಾಗಿರುವುದು ಹೇಗೆ ಎಂಬಿತ್ಯಾದಿಗಳಿಗೆ ಪರಿಹಾರ ಸೂಚಿಸುವ ಜೊತೆಗೆ ಪರೀಕ್ಷೆಗಳ ಬಳಿಕ ಏನು ಮಾಡಬೇಕು ಎನ್ನುವದಕ್ಕೂ ಮೋದಿ ಪುಸ್ತಕದಲ್ಲಿ ಉತ್ತರಿಸಲಿದ್ದಾರೆ. ಇದರೊಂದಿಗೆ ಅಧಿಕಾರದಲ್ಲಿದ್ದಾಗ ಪುಸ್ತಕ ರಚಿಸಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ.

ಪುಸ್ತಕವು ಹಲವು ಭಾಷೆಗಳಲ್ಲಿದ್ದು, ಈ ವರ್ಷವೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಪ್ರಕಾಶನ ಸಂಸ್ಥೆ ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ ತಿಳಿಸಿದೆ.

ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಎಲ್ಲ ವಿಷಯಗಳು, ವಿಶೇಷವಾಗಿ 10 ಮತ್ತು 12ನೇ ತರಗತಿಗಳ ಪರೀಕ್ಷೆಗಳಿಗೆ ಸಂಬಂಧಿಸಿ ಸಲಹೆಗಳು ಈ ಪುಸ್ತಕದಲ್ಲಿರಲಿವೆ.

 ಪುಸ್ತಕದ ಪರಿಕಲ್ಪನೆ ಖುದ್ದು ಮೋದಿಯವರಿಗೆ ಹೊಳೆದಿತ್ತು ಎಂದು ಪೆಂಗ್ವಿನ್ ತಿಳಿಸಿದೆ. ತನ್ನ ಮನ್ ಕಿ ಬಾತ್ ಮಾಸಿಕ ರೇಡಿಯೊ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳ ಸಂಕಲನವನ್ನು ಕೆಲವು ವಿಶಿಷ್ಟ ದೃಷ್ಟಿಕೋನ ಗಳೊಂದಿಗೆ ಪುಸ್ತಕ ರೂಪದಲ್ಲಿ ತರಲು ಅವರು ನಿರ್ಧರಿಸಿದ್ದಾರೆ ಎಂದು ಅದು ತಿಳಿಸಿದೆ.

‘‘ನನ್ನ ಹೃದಯಕ್ಕೆ ಹತ್ತಿರವಾದ ಮತ್ತು ಯುವಚಾಲಿತ ಮತ್ತು ಯುವನೇತೃತ್ವದ ನಾಳೆಯ ಕುರಿತು ನನ್ನ ಕನಸಿಗೆ ಬುನಾದಿಯಾಗಿರುವ ವಿಷಯದ ಮೇಲೆ ಬರೆಯಲು ನಾನು ಆಯ್ಕೆ ಮಾಡಿಕೊಂಡಿದ್ದೇನೆ’’ ಎಂದು ಮೋದಿಯವರನ್ನು ಉಲ್ಲೇಖಿಸಿ ಪೆಂಗ್ವಿನ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News