×
Ad

ಇವಿಎಂ ತಿರುಚಿದ ಆರೋಪದ ತನಿಖೆ ಕೋರಿ ಅರ್ಜಿ: 2 ವಾರದೊಳಗೆ ಉತ್ತರಿಸಲು ಇಸಿಗೆ ಸುಪ್ರೀಂ ಸೂಚನೆ

Update: 2017-07-03 23:06 IST

 ಹೊಸದಿಲ್ಲಿ, ಜು.3: ಈ ವರ್ಷಾರಂಭ ನಡೆದ ವಿಧಾನಸಭೆ ಚುನಾವಣೆ ಸಂದರ್ಭ ಇವಿಎಂ(ವಿದ್ಯುನ್ಮಾನ ಮತಯಂತ್ರ)ಗಳನ್ನು ತಿರುಚಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಬೇಕೆಂಬ ಅರ್ಜಿಯ ಕುರಿತು ಎರಡು ವಾರದೊಳಗೆ ಉತ್ತರಿಸುವಂತೆ ಸುಪ್ರೀಂಕೋರ್ಟ್ ಚುನಾವಣಾ ಆಯೋಗ(ಇಸಿ) ಕ್ಕೆ ಸೂಚಿಸಿದೆ. ಬಿಎಸ್ಪಿ ಸೇರಿದಂತೆ ರಾಜಕೀಯ ಪಕ್ಷಗಳು ಸಲ್ಲಿಸಿರುವ ಹಲವು ಅರ್ಜಿಗಳು

 ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿದ್ದು ಈ ಬಗ್ಗೆ ನೋಟಿಸ್ ನೀಡಲಾಗಿದೆ. ಈ ಅರ್ಜಿಯನ್ನೂ ಅವುಗಳ ಜೊತೆ ಸೇರಿಸಬೇಕು ಎಂದು ಚುನಾವಣಾ ಆಯೋಗದ ಪರ ವಕೀಲರು ನ್ಯಾಯಾಲಯದ ಪೀಠಕ್ಕೆ ತಿಳಿಸಿದರು.

ಆದರೆ ಅರ್ಜಿ ಸಲ್ಲಿಸಿದ್ದ ವಕೀಲ ಎಂ.ಎಲ್.ಶರ್ಮ ಚುನಾವಣಾ ಆಯೋಗದ ವಾದವನ್ನು ವಿರೋಧಿಸಿದರು. ತಾನು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ(ಪಿಐಎಲ್) ವಿಭಿನ್ನ ವಿಷಯವನ್ನೊಳಗೊಂಡಿದೆ. ಚುನಾವಣಾ ಆಯೋಗದ ವಕೀಲರು ನ್ಯಾಯಾಲಯದ ದಿಕ್ಕು ತಪ್ಪಿಸುತ್ತಿದ್ದಾರೆ. ರಾಜಕೀಯ ಪಕ್ಷಗಳು ಸಲ್ಲಿಸಿರುವ ಪಿಐಎಲ್ ಬಗ್ಗೆ ಅವರು ಹೇಳಿದ್ದಾರೆ. ಆದರೆ ರಾಜಕೀಯ ಪಕ್ಷಗಳು ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಲು ಆಗುತ್ತದೆಯೇ ಎಂದವರು ಪ್ರಶ್ನಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಾಲಯ, ರಾಜಕೀಯ ಪಕ್ಷಗಳೂ ಇಎಂವಿ ಬಗ್ಗೆ ಸವಾಲು ಹಾಕಿವೆ. ನಿಮ್ಮ ಅರ್ಜಿಯೂ ಇದೇ ವಿಷಯಕ್ಕೆ ಸಂಬಂಧಿಸಿದ್ದು. ಆದ್ದರಿಂದ ಎರಡರ ವಿಷಯವೂ ಸಮಾನವಾಗಿದೆ ಎಂದು ಹೇಳಿತು. ಆದರೆ ರಾಜಕೀಯ ಪಕ್ಷಗಳು ಮುಂಬರುವ ಚುನಾವಣೆ ಸಂದರ್ಭ ಬಳಸುವ ಇಎಂವಿಗಳಿಗೆ ಮತದಾನ ಪ್ರಾತ್ಯಕ್ಷಿಕೆ ವ್ಯವಸ್ಥೆ(ವಿವಿಪಿಎಟಿ) ಅಳವಡಿಸಬೇಕೆಂದು ಕೋರಿದ್ದಾರೆ. ಆದರೆ ತನ್ನ ಅರ್ಜಿಯಲ್ಲಿ ಈ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆದ್ದರಿಂದ ಇವೆರಡೂ ಸಮಾನವಲ್ಲ ಎಂದು ಶರ್ಮ ವಾದಿಸಿದರು.

ಶರ್ಮ ಸಲ್ಲಿಸಿದ ಅರ್ಜಿಗೆ ಎರಡು ವಾರದೊಳಗೆ ಉತ್ತರಿಸುವಂತೆ ಆಯೋಗಕ್ಕೆ ಸೂಚಿಸಿದ ನ್ಯಾಯಾಲಯ, ಉತ್ತರ ದೊರೆತ ಬಳಿಕ ಮುಂದಿನ ಎರಡು ವಾರದೊಳಗೆ ಪ್ರತ್ಯುತ್ತರ ನೀಡುವಂತೆ ಶರ್ಮಗೆ ಸೂಚಿಸಿತು ಹಾಗೂ ಶರ್ಮ ಸಲ್ಲಿಸಿದ್ದ ಅರ್ಜಿಯನ್ನು ಇವಿಎಂ ಬಗ್ಗೆ ವಿಚಾರಣೆಗೆ ಬಾಕಿ ಇರುವ ಇತರ ಅರ್ಜಿಯ ಜೊತೆ ಸೇರಿಸಿತು.

  ಈ ವರ್ಷಾರಂಭ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಳಸಲಾಗಿದ್ದ ಇವಿಎಂಗಳನ್ನು ಸಾಫ್ಟ್‌ವೇರ್ ತಂತ್ರಜ್ಞರಿಂದ ಪರಿಶೀಲನೆ ನಡೆಸಬೇಕೆಂಬ ಪಿಐಎಲ್ ಅರ್ಜಿಯ ಬಗ್ಗೆಯೂ ಪ್ರತಿಕ್ರಿಯೆ ಸಲ್ಲಿಸುವಂತೆ ಈ ಹಿಂದೆ ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News