ರಸ್ತೆ ಮರು ನಾಮಕಾರಣ ವಿವಾದ ಬಗೆಹರಿಸುವ ಹೊಣೆಗಾರಿಕೆ ಶಾಸಕರು ವಹಿಸಲಿ: ಮೋನಪ್ಪ ಭಂಡಾರಿ
ಮಂಗಳೂರು, ಜು. 3: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಲೈಟ್ ಹೌಸ್ ರಸ್ತೆಗೆ ಮರುನಾಮಕರಣ ಮಾಡುವ ವಿಚಾರದಲ್ಲಿ ಶಾಸಕ ಜೆ.ಆರ್.ಲೋಬೊ ಸರಕಾರದಿಂದ ತಡೆಯಾಜ್ಞೆ ತರುವ ಮೂಲಕ ಅನಗತ್ಯವಾದ ವಿವಾದವನ್ನು ಸೃಷ್ಟಿಸಿದ್ದಾರೆ ಅದನ್ನು ಬಗೆಹರಿಸುವ ಹೊಣೆಗಾರಿಕೆಯೂ ಅವರು ಹೊರಬೇಕು ಎಂದು ಮಾಜಿ ಶಾಸಕ ಮೋನಪ್ಪ ಭಂಡಾರಿ ತಿಳಿಸಿದ್ದಾರೆ.
ಮಂಗಳೂರು ಮನಪಾದ ಸಾಮಾನ್ಯ ಸಭೆಯಲ್ಲಿ ಲೈಟ್ ಹೌಸ್ ಹಿಲ್ ರಸ್ತೆಗೆ ‘ಮೂಲ್ಕಿ ಸುಂದರಾಮ ಶೆಟ್ಟಿ ರಸ್ತೆ ’ಎಂದು ಮರುನಾಮಕರಣ ಮಾಡುವ ಬಗ್ಗೆ ಸರ್ವಾನುಮತದ ತೀರ್ಮಾನ 2015, ಸೆ.30 ಸಭೆಯಲ್ಲಿ ಆಗಿತ್ತು.
ಬಳಿಕ ಪತ್ರಿಕಾ ಜಾಹೀರಾತು ಮೂಲಕ ಆಕ್ಷೇಪಣೆಗೆ ಅವಕಾಶ ಕಲ್ಪಿಸಿದ ಬಳಿಕ ಸರಕಾರದ ಆದೇಶವಾಗಿತ್ತು. ಪ್ರಸಕ್ತ ಶಾಸಕರು ಒಂದೇ ದಿನದಲ್ಲಿ ಆದೇಶಕ್ಕೆ ತಡೆಯಾಜ್ಞೆ ತಂದಿದ್ದಾರೆ. ಈ ರೀತಿ ಅನಗತ್ಯವಾದ ಗೊಂದಲ ಸೃಷ್ಟಿಗೆ ಕಾರಣರಾದ ಶಾಸಕರು ಅದನ್ನು ಬಗೆಹರಿಸುವ ಹೊಣೆಗಾರಿಕೆಯನ್ನು ಇತರರ ಮೇಲೆ ಹಾಕದೆ ಶಾಸಕ ಜೆ.ಆರ್.ಲೋಬೊ ಮತ್ತು ಐವನ್ ವಹಿಸಿಕೊಳ್ಳಬೇಕು ಎಂದು ಮೋನಪ್ಪ ಭಂಡಾರಿ ಆಗ್ರಹಿಸಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ಬಿಜೆಪಿ ಮುಖಂಡರಾದ ವೇದವ್ಯಾಸ ಕಾಮತ್,ರವಿಶಂಕರ್ ಮಿಜಾರ್,ಕಿಶೋರ್ ರೈ,ನಮಿತಾ ಶ್ಯಾಂ ಮೊದಲಾದವರು ಉಪಸ್ಥಿತರಿದ್ದರು.