ಸೀತಾನದಿ ಭೋಜ ಶೆಟ್ಟಿ ಹತ್ಯೆ ಪ್ರಕರಣ: ಮೂವರು ಶಂಕಿತ ನಕ್ಸಲರ ವಿಚಾರಣೆ ಆ.21ಕ್ಕೆ ಮುಂದೂಡಿಕೆ

Update: 2017-07-03 17:56 GMT

ಉಡುಪಿ, ಜು.3: ಹೆಬ್ರಿ ಸಮೀಪದ ನಾಡ್ಪಾಲು ಗ್ರಾಮದ ಸೀತಾನದಿ ಪರಿಸರದಲ್ಲಿ ಎಂಟು ವರ್ಷಗಳ ಹಿಂದೆ ನಡೆದ ಶಿಕ್ಷಕ ಭೋಜ ಶೆಟ್ಟಿ ಹಾಗೂ ಕೃಷಿಕ ಸುರೇಶ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳಾದ ಮೂವರು ಶಂಕಿತ ನಕ್ಸಲರ ವಿಚಾರಣೆಯನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆ.21ಕ್ಕೆ ಮುಂದೂಡಿದೆ.

 ಪ್ರಕರಣದ ಮೂವರು ಬಂಧಿತ ಆರೋಪಿಗಳಾದ ನೀಲಗುಳಿ ಪದ್ಮನಾಭ ಯಾನೆ ಪದ್ದಣ್ಣ, ವೀರಮಣಿ ಯಾನೆ ವಜ್ರಮಣಿ ಯಾನೆ ಈಶ್ವರ ಚಿನ್ನಪಿಳ್ಳೈ ಹಾಗೂ ರಮೇಶ್ ಅವರನ್ನು ಪೊಲೀಸರು ನ್ಯಾಯಾಲಯದ ಮುಂದೆ ಇಂದು ಹಾಜರು ಪಡಿಸದ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕಾ ಟಿ. ಅವರು ಮುಂದಿನ ವಿಚಾರಣೆಯನ್ನು ಆ.21ಕ್ಕೆ ನಿಗದಿ ಪಡಿಸಿದರು.
 

ಇವರಲ್ಲಿ ತಮಿಳುನಾಡು ಪೊಲೀಸರಿಂದ ಬಂಧಿತರಾಗಿರುವ ವೀರಮಣಿ ಕೊಯಮತ್ತೂರು ಜೈಲಿನಲ್ಲಿದ್ದರೆ, ರಮೇಶ್ ಬೆಂಗಳೂರು ಹಾಗೂ ನೀಲಗುಳಿ ಚಿಕ್ಕಮಗಳೂರು ಜೈಲಿನಲ್ಲಿದ್ದಾರೆ. ಇಂದು ನೀಲಗುಳಿ ಮತ್ತು ರಮೇಶ್ ಪರವಾಗಿ ಉಡುಪಿ ನ್ಯಾಯವಾದಿ ಎಂ.ಶಾಂತರಾಮ್ ಶೆಟ್ಟಿ ಅವರು ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

ಈ ಅವಳಿ ಕೊಲೆ ಪ್ರಕರಣದಲ್ಲಿ ಕೊಪ್ಪಳದ ಚಂದ್ರಶೇಖರ ಗೋರಬಾಳ್ ಯಾನೆ ತಿಪ್ಪೇಶ್, ಕೊಪ್ಪದ ನಂದ ಕುಮಾರ್, ಶಿವಮೊಗ್ಗದ ದೇವೇಂದ್ರಪ್ಪಯಾನೆ ವಿಷ್ಣು ಯಾನೆ ದೇವಣ್ಣ ಹಾಗೂ ನಂದಕುಮಾರ್‌ರ ಪತ್ನಿ ಭದ್ರಾವತಿಯ ಆಶಾ ಯಾನೆ ಸುಧಾ ಅವರು ಇದೇ ನ್ಯಾಯಾಲಯದಿಂದ ಕಳೆದ ನ.11ರಂದು ದೋಷಮುಕ್ತ ಗೊಂಡಿದ್ದರು.
 

2008ರ ಮೇ 15ರ ರಾತ್ರಿ 8:15ರ ಸುಮಾರಿಗೆ ಕಾರ್ಕಳ ತಾಲೂಕು ಹೆಬ್ರಿ ಪೋಲೀಸ್ ಠಾಣಾ ವ್ಯಾಪ್ತಿಯ ನಾಡ್ಪಾಲು ಗ್ರಾಮದ ಸೀತಾನದಿ ಬಳಿಯ ಬಾಳುಬ್ಬೆ ನಿವಾಸಿ, ಶಾಲಾ ಶಿಕ್ಷಕ ಭೋಜ ಶೆಟ್ಟಿ ಹಾಗೂ ಅವರ ಸ್ನೇಹಿತ ನೆರೆಮನೆಯ ಸುರೇಶ್ ಶೆಟ್ಟಿ ಬೈಕ್‌ನಲ್ಲಿ ಮನೆಗೆ ಬಂದು, ಗೇಟು ತೆಗೆದು ಒಳಗೆ ಹೋಗುತ್ತಿದ್ದಾಗ ನಕ್ಸಲರ ತಂಡ ಇವರ ಮೇಲೆ ಗುಂಡಿನ ದಾಳಿ ನಡೆಸಿತ್ತು. ಇವರು ಪೊಲೀಸರ ಮಾಹಿತಿದಾರರಾಗಿ ಕಾರ್ಯನಿರ್ವಹಿಸುತಿದ್ದರೆಂಬ ಆರೋಪದಲ್ಲಿ ಈ ಹತ್ಯೆ ಮಾಡಲಾಗಿತ್ತು.

ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಭೋಜ ಶೆಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಸುರೇಶ್ ಶೆಟ್ಟಿ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತ ಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ನಕ್ಸಲರಾದ ಮನೋಹರ್, ವಸಂತ, ಸಂಜೀವ, ನೀಳಗುಳಿ ಪದ್ಮನಾಭ, ಬಿ.ಜಿ.ಕೃಷ್ಣಮೂರ್ತಿ, ಚಂದ್ರಶೇಖರ ಗೋರಬಾಳ್, ನಂದಕುಮಾರ್, ದೇವೇಂದ್ರಪ್ಪ, ಆಶಾ, ರಮೇಶ್, ಈಶ್ವರ (ವೀರಮಣಿ) ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

ಇವರಲ್ಲಿ ಮನೋಹರ್ ಹಾಗೂ ವಸಂತ ಪೊಲೀಸ್ ಎನ್‌ಕೌಂಟರ್‌ಗೆ ಬಲಿ ಯಾಗಿದ್ದರೆ, ಸಂಜೀವ ಹೈದರಾಬಾದ್ ಜೈಲಿನಿಂದ ಪರಾರಿಯಾಗಿದ್ದರು. ಬಿ.ಜಿ. ಕೃಷ್ಣಮೂರ್ತಿ ಒಬ್ಬರು ಮಾತ್ರ ಈ ಪ್ರಕರಣಲ್ಲಿ ಇನ್ನೂ ತಲೆಮರೆಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News