ಭಯೋತ್ಪಾದಕ ದಾಳಿಗಳಲ್ಲಿ ಮುಸ್ಲಿಮರ ಹೆಸರಿದ್ದರೆ 5 ಪಟ್ಟು ಹೆಚ್ಚು ಪ್ರಚಾರ: ಅಧ್ಯಯನದಿಂದ ಬಹಿರಂಗ

Update: 2017-07-04 12:18 GMT

ವಾಷಿಂಗ್ಟನ್, ಜು.4: ಅಮೆರಿಕದಲ್ಲಿ ನಡೆಯುವ ಭಯೋತ್ಪಾದಕ ದಾಳಿಗಳಲ್ಲಿ ಮುಸ್ಲಿಮರ ಹೆಸರಿದ್ದರೆ, ಮುಸ್ಲಿಮೇತರರು ನಡೆಸುವ ಭಯೋತ್ಪಾದಕ ದಾಳಿಗಳಿಗಿಂತ ಐದು ಪಟ್ಟು ಹೆಚ್ಚು ಮಾಧ್ಯಮ ಪ್ರಚಾರವನ್ನು ಪಡೆಯುತ್ತದೆ ಎಂಬುದನ್ನು ಅಧ್ಯಯನವೊಂದು ಕಂಡುಕೊಂಡಿದೆ ಎಂದು independent.co.uk ವರದಿ ಮಾಡಿದೆ.

ಅಮೆರಿಕದಲ್ಲಿ 2011 ಮತ್ತು 2015ರ ನಡುವೆ ನಡೆದ ಎಲ್ಲ ಭಯೋತ್ಪಾದಕ ದಾಳಿಗಳ ವರದಿಗಾರಿಕೆಗಳ ವಿಶ್ಲೇಷಣೆಯಲ್ಲಿ ಈ ಅಂಶ ಬಹಿರಂಗಗೊಂಡಿದ್ದು, ದಾಳಿಯಲ್ಲಿ ಮುಸ್ಲಿಮರು ಆರೋಪಿಗಳಾಗಿದ್ದರೆ, ಮಾಧ್ಯಮ ಗಮನವು 449 ಶೇಕಡದಷ್ಟು ಹೆಚ್ಚಿರುವುದನ್ನು ಅಧ್ಯಯನವು ಪತ್ತೆಹಚ್ಚಿದೆ.

ಮುಸ್ಲಿಮ್ ಆರೋಪಿಗಳು ನಡೆಸಿದ್ದಾರೆ ಎನ್ನಲಾದ ದಾಳಿಗಳು 12.4 ಶೇಕಡವಾಗಿದ್ದರೆ ಈ ದಾಳಿಗಳ ವರದಿಗಾರಿಕೆಯ ಶೇ. 41.4ರಷ್ಟಿದೆ. ಮುಸ್ಲಿಮರ ಬಗ್ಗೆ ಜನರು ಹೆಚ್ಚು ಹೆದರುವಂತೆ ಮಾಧ್ಯಮಗಳು ಮಾಡುತ್ತವೆ ಎಂಬುದನ್ನು ಈ ಅಂಕಿಸಂಖ್ಯೆಗಳು ಸೂಚಿಸುತ್ತವೆ ಎಂದು ಅಧ್ಯಯನದ ಲೇಖಕರು ಅಭಿಪ್ರಾಯಪಡುತ್ತಾರೆ.

ಅಮೆರಿಕದ ನೆಲದಲ್ಲಿ ನಡೆದ ಪ್ರತಿಯೊಂದು ಭಯೋತ್ಪಾದಕ ದಾಳಿಯ ಬಗ್ಗೆ ಅಮೆರಿಕದ ಪತ್ರಿಕೆಗಳು ಮಾಡಿರುವ ವರದಿಗಳನ್ನು ಸಂಶೋಧಕರು ಅಧ್ಯಯನ ಮಾಡಿ ಹಾಗೂ ಪ್ರತಿಯೊಂದು ದಾಳಿಗೆ ಸಂಬಂಧಿಸಿ ಪ್ರಕಟಗೊಂಡ ಬರಹಗಳ ಸಂಖ್ಯೆಯನ್ನು ಎಣಿಕೆ ಮಾಡಿದ್ದಾರೆ. 2013ರಲ್ಲಿ ಇಬ್ಬರು ಭಯೋತ್ಪಾದಕರು ಬೋಸ್ಟನ್ ಮ್ಯಾರಥಾನ್ ಬಾಂಬ್ ಸ್ಫೋಟ ನಡೆಸಿದರು. ಆ ಘಟನೆಯಲ್ಲಿ ಮೂವರು ಮೃತಪಟ್ಟರು. ಆ ಘಟನೆಯು ಈ ಐದು ವರ್ಷಗಳ ಅಧ್ಯಯನ ಅವಧಿಯಲ್ಲಿ ಅಮೆರಿಕದಲ್ಲಿ ನಡೆದ ಎಲ್ಲ ಭಯೋತ್ಪಾದಕ ಘಟನೆಗಳ ಒಟ್ಟು ವರದಿಗಾರಿಕೆಯ ಶೇ. 20 ಸ್ಥಳವನ್ನು ಆಕ್ರಮಿಸಿಕೊಂಡಿತು ಎಂಬುದನ್ನು ಅಧ್ಯಯನಕಾರರು ಕಂಡುಕೊಂಡಿದ್ದಾರೆ.

ಇದಕ್ಕೆ ವ್ಯತಿರಿಕ್ತವಾಗಿ, 2012ರಲ್ಲಿ ವಿಸ್ಕೋನ್ಸಿನ್‌ನಲ್ಲಿರುವ ಸಿಖ್ ಮಂದಿರವೊಂದರಲ್ಲಿ ಮೈಕಲ್ ಪೇಜ್ ಎಂಬ ಬಿಳಿಯ ವ್ಯಕ್ತಿ ದಾಳಿ ನಡೆಸಿ ಆರು ಮಂದಿಯನ್ನು ಕೊಂದನಾದರೂ, ಅದಕ್ಕೆ ಕೇವಲ 3.8 ಶೇಕಡ ಪ್ರಚಾರ ಮಾತ್ರ ದೊರಕಿತು ಎಂದು ಅಧ್ಯಯನ ತಿಳಿಸಿದೆ.

ಟ್ರಂಪ್ ಆರೋಪದಲ್ಲಿ ಹುರುಳಿಲ್ಲ: ಅಧ್ಯಯನದಿಂದ ಬಹಿರಂಗ
"ಮುಸ್ಲಿಮರು ನಡೆಸುವ ಭಯೋತ್ಪಾದಕ ದಾಳಿಗಳ ಬಗ್ಗೆ ಮಾಧ್ಯಮಗಳು ವರದಿ ಮಾಡುವುದಿಲ್ಲ" ಎಂಬುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಬ್ರವರಿಯಲ್ಲಿ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ತಮ್ಮ  ಅಧ್ಯಯನವು ಸಾಬೀತುಪಡಿಸಿದೆ ಎಂದು ಸಂಶೋಧಕರು ಹೇಳುತ್ತಾರೆ. ''ಕೆಲವು ಭಯೋತ್ಪಾದಕ ದಾಳಿಗಳ ಬಗ್ಗೆ ಮಾಧ್ಯಮಗಳು ಸರಿಯಾಗಿ ವರದಿ ಮಾಡುವುದಿಲ್ಲ ಎಂದು ಅಧ್ಯಕ್ಷ ಟ್ರಂಪ್ ಹೇಳುತ್ತಾರೆ. ಆದರೆ, ಅದು ಸರಿಯಲ್ಲ ಎನ್ನುವುದು ಸಾಬೀತಾಗಿದೆ'' ಎಂದು ವರದಿಯಲ್ಲಿ ಅವರು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News