ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಫಾರಸು: ಐವನ್ ಡಿಸೋಜಾ
ಮಂಗಳೂರು, ಜು. 4: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್)ನಿಂದ ದ.ಕ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ರಚನೆಯಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಗುಣಮಟ್ಟದಿಂದ ಕೂಡಿಲ್ಲ. ಕೆಲವು ಕಾರ್ಯ ನಿರ್ವಹಿಸುತ್ತಿಲ್ಲ. ಮತ್ತೆ ಕೆಲವೆಡೇ ಘಟಕಗಳು ಆರಂಭವೇ ಗೊಂಡಿಲ್ಲ. ಇಂತಹ ವ್ಯವಸ್ಥೆಯಿಂದಾಗಿ ಗ್ರಾಮೀಣ ಜನರಿಗೆ ಪ್ರಯೋಜನವಾಗಲುವ ಬದಲು ಸರಕಾರದ ಹಣ ಪೋಲಾಗುತ್ತಿದೆ ಎಂಬುದಾಗಿ ದ.ಕ. ಜಿಲ್ಲಾ ಪಂಚಾಯತ್ ಸದಸ್ಯರನೇಕರಿಂದ ಪಕ್ಷಾತೀತ ಆರೋಪ ವ್ಯಕ್ತವಾಯಿತು.
ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳ ಕಳಪೆ ಗುಣಮಟ್ಟದ ಬಗ್ಗೆ ಸದಸ್ಯರಾದ ಶಯನಾ ಜಯನಂದ, ವಿನೋದ್, ಎಂ.ಎಸ್. ಮುಹಮ್ಮದ್, ಧರಣೇಂದ್ರ ಕುಮಾರ್ ಮೊದಲಾದವರು ಆಕ್ಷೇಪ ವ್ಯಕ್ತಪಡಿಸಿದರು.
ಈ ಬಗ್ಗೆ ಸಭೆಯಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜಾರವರು, ಅಧಿಕಾರಿಯಲ್ಲಿ ಮಾಹಿತಿ ಕೋರಿದಾಗ, ದ.ಕ. ಜಿಲ್ಲೆಯಲ್ಲಿ ಕೆಲವೊಂದು ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಘಟಕಗಳು ಕೆಲ ಸಂದರ್ಭಗಳಲ್ಲಿ ಮಾತ್ರವೇ ಬಳಕೆಯಾಗುತ್ತಿರುವುದರಿಂದ ಪದೇ ಪದೇ ತೊಂದರೆ ಕಾಣಿಸಿಕೊಳ್ಳುತ್ತಿದೆ. ಅದನ್ನು ರಿಪೇರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕೆಲವೊಂದು ಕಡೆ ಘಟಕ ನಿರ್ಮಾಣವಾಗದಿರಲು ಹಣಕಾಸಿನ ತೊಂದರೆ ಇದೆಯೇ ಎಂಬ ಪ್ರಶ್ನೆಗೆ ಹಣಕಾಸಿನ ತೊಂದರೆಯಿಲ್ಲ ಎಂದು ಅಧಿಕಾರಿ ಹೇಳಿದಾಗ, ಹಾಗಿದ್ದರೆ ಸರಕಾರದ ಹಣ ಯಾಕೆ ಬಳಕೆಯಾಗುತ್ತಿಲ್ಲ ಎಂದು ಪ್ರಶ್ನಿಸಿದರು.ಈ ಜಿಲ್ಲೆಗೆ ಅಂತಹ ಘಟಕಗಳು ಉಪಯೋಗವಿಲ್ಲದ್ದಾಗ ಆ ಬಗ್ಗೆ ಸರಕಾರದ ಗಮನ ಸೆಳೆಯುವ ಜವಾಬ್ಧಾರಿ ಯಾರದ್ದು ಎಂಬ ಪ್ರಶ್ನೆಗೂ ತಮ್ಮದೇ ಎಂದು ಅಧಿಕಾರಿ ಒಪ್ಪಿಕೊಂಡರು.
ಈಗಾಗಲೇ ಒಂದನೆ ಹಂತದ ಶುದ್ಧ ಕುಡಿಯುವ ನೀರಿನ ಕಾಮಗಾರಿ ಸಮರ್ಪಕವಾಗಿಲ್ಲ. 2ನೆ ಮತ್ತು 3ನೆ ಹಂತದ ಕಾಮಗಾರಿ ಇನ್ನೂ ಆಗಿಲ್ಲ. ಈ ನಡುವೆ ಜಿಲ್ಲೆಗೆ ನಾಲ್ಕನೆ ಹಂತಕ್ಕೆ 68 ಘಟಕಗಳು ಮಂಜೂರಾಗಿವೆ ಎಂದು ಸಿಇಒ ಡಾ.ಎಂ.ಆರ್. ರವಿ ಸಭೆಗೆ ಮಾಹಿತಿ ನೀಡಿದರು.
ಈ ನಡುವೆ ಸಭೆಯಲ್ಲಿ ಕೆಆರ್‌ಐಡಿಎಲ್‌ನ ಕಾಮಗಾರಿ, ಗುಣಮಟ್ಟದ ಬಗ್ಗೆ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಮಾತುಕತೆ ನಡೆಸುತ್ತೇನೆ. ನಾಳೆ ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಲ್ಲಿಯೂ ಈ ಕಾಮಗಾರಿಯ ತಪ್ಪಿತಸ್ಥರನ್ನು ಕಪ್ಪು ಪಟ್ಟಿಗೆ ಸೇರಿಸುವುದು ಮತ್ತು ಅಮಾನತು ಮಾಡುವ ಬಗ್ಗೆ ಶಿಫಾರಸು ಮಾಡುವುದಾಗಿ ಐವನ್ ಡಿಸೋಜಾ ತಿಳಿಸಿದರು.
ಶುದ್ಧ ಕುಡಿಯುವ ನೀರಿನ ಘಟಕಗಳು ಬಯಲು ಸೀಮೆಯ ಜನರನ್ನು ಉದ್ದೇಶಿಸಿ ತಯಾರಿಸಲಾಗಿದೆ. ಇದು ದ.ಕ. ಜಿಲ್ಲೆಗೆ ಪ್ರಯೋಜನವಾಗುವುದಿಲ್ಲ. ಈ ಅನುದಾನವನ್ನು ಕುಡಿಯುವ ನೀರಿನ ಇತರ ಯೋಜನೆಗಳಿಗೆ ವಿನಿಯೋಗಿಸಬೇಕು. ಆ ಕಾಮಗಾರಿಯನ್ನು ಕೆಆರ್‌ಐಡಿಎಲ್‌ನಿಂದ ರದ್ದುಪಡಿಸಿ ಜಿಲ್ಲಾ ಪಂಚಾಯತ್ ಇಂಜನಿಯರ್ ವ್ಯಾಪ್ತಿಗೊಳಪಡಿಸಬೇಕು ಎಂದು ಸದಸ್ಯೆ ಪ್ರಮೀಳಾ ಜಯಾನಂದ್‌ರವರ ಸಲಹೆಗೆ ಸಭೆಯಲ್ಲಿ ಸಹಮತ ವ್ಯಕ್ತವಾಯಿತು.
ಕೃಷಿ ಭಾಗ್ಯ ಯೋಜನೆ: ಜಿಲ್ಲೆಗೆ 550 ಲಕ್ಷ ಅನುದಾನ; 700 ಕೃಷಿ ಹೊಂಡಗಳ ಗುರಿ: 252 ಅರ್ಜಿ ಸ್ವೀಕಾರ
ರಾಜ್ಯ ಸರಕಾರದ ಕೃಷಿ ಭಾಗ್ಯ ಯೋಜನೆಯಡಿ ದ.ಕ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 700 ಕೃಷಿಹೊಂಡಗಳ ನಿರ್ಮಾಣಕ್ಕಾಗಿ 550 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಈಗಾಗಲೇ 252 ಕೃಷಿಕರಿಂದ ಅರ್ಜಿ ಸ್ವೀಕಾರವಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಸಭೆಯಲ್ಲಿ ತಿಳಿಸಿದರು.
ಜಿ.ಪಂ. ಸದಸ್ಯರಿಗೆ ಈ ಬಗ್ಗೆ ಸಮರ್ಪಕ ಮಾಹಿತಿ ಇಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಸರ್ವೋತ್ತಮ ಗೌಡ ಹೇಳಿದರು.
ಈ ಬಗ್ಗೆ ಮಾಹಿತಿ ನೀಡಿದ ಕೆಂಪೇಗೌಡ, ಕೃಷಿ ಭಾಗ್ಯ ಯೋಜನೆ ಐದು ಮಾದರಿಗಳಲ್ಲಿ ಅನ್ವಯವಾಗಲಿದ್ದು, ಫಲಾನುಭವಿ ಕೃಷಿಕ ಕನಿಷ್ಠ 1 ಎಕರೆ ಜಮೀನು ಹೊಂದಿರುವ ಜತೆಗೆ ಕೃಷಿ ಹೊಂಡ ರಚನೆ ಕಡ್ಡಾಯ ಎಂದು ಅವರು ಹೇಳಿದರು. ಮಾತ್ರವಲ್ಲದೆ ನಿರ್ಮಾಣವಾದ ಕೃಷಿ ಹೊಂಡಕ್ಕೆ ಬೇಲಿಯನ್ನೂ ನಿರ್ಮಾಣ ಮಾಡಬೇಕು. ಕೃಷಿ ಹೊಂಡದ ಅಳತೆಯನ್ನು 21 ಮೀಟರ್‌ವರೆಗೂ ವಿಸ್ತರಿಸಲು ಅವಕಾಶವಿದೆ. ಇದಕ್ಕಾಗಿ ಕನಿಷ್ಠ ಸುಮಾರು 7 ಸೆಂಟ್ಸ್ ಜಾಗ ಅಗತ್ಯವಿರುವುದರಿಂದ ಫಲಾನುಭವಿಗೆ 1 ಎಕರೆ ಭೂಮಿಯನ್ನು ಕಡ್ಡಾಯಗೊಳಿಸಲಾಗಿದೆ. ದ.ಕ. ಜಿಲ್ಲೆಯಲ್ಲಿ 12 ಅಡಿವರೆಗೆ ಈ ಕೃಷಿ ಹೊಂಡಗಳನ್ನು ಮಾಡಲು ಅವಕಾಶವಿದೆ. ಹೊಂಡಕ್ಕೆ ಆಗುವ ವೆಚ್ಚದ ಶೇ. 80ರಷ್ಟು ಹಣ ರೈತರ ಖಾತೆಗೆ ನೇರವಾಗಿ ಜಮಾ ಆಗಲಿದೆ. ಉಳಿದ ಶೇ. 20ರಷ್ಟನ್ನು ಫಲಾನುಭವಿ ಭರಿಸತಕ್ಕದ್ದು. (ಪರಿಶಿಷ್ಟ ಜಾತಿ/ ಪಂಗಡಕ್ಕೆ ಸೇರಿದ ರೈತನಾಗಿದ್ದಲ್ಲಿ ಶೇ. 90ರಷ್ಟು ಅನುದಾನ ಲಭ್ಯವಾಗಲಿದೆ) ಈ ಹೊಂಡಗಳ ನಿರ್ಮಾಣಕ್ಕೆ ಜೆಸಿಬಿ, ಹಿತಾಚಿಯಂತಹ ಯಂತ್ರಗಳನ್ನು ಬಳಸಬಹುದಾಗಿದ್ದು, ಫಲಾನುಭವಿ ಬೇಡಿಕೆ ಸಲ್ಲಿಸಿದ್ದಲ್ಲಿ ಅದರ ಮೊತ್ತವನ್ನು ಸಂಬಂಧಪಟ್ಟ ಯಂತ್ರೋಪಕರಣಗಳ ಮಾಲಕರ ಖಾತೆಗೆ ವರ್ಗಾಯಿಸಲಾಗುತ್ತದೆ. ಕೃಷಿ ಹೊಂಡವೊಂದಕ್ಕೆ ಅಂದಾಜು ವೆಚ್ಚ 55,000 ರೂ.ವರೆಗೆ ಸಹಾಯಧನ ದೊರೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಕೃಷಿ ಭಾಗ್ಯ ಯೋಜನೆಯನ್ನು ಇದೇ ಮೊದಲ ಬಾರಿಗೆ ಪ್ರಸಕ್ತ ಸಾಲಿನಲ್ಲಿ ಕರಾವಳಿ ಜಿಲ್ಲೆಗೆ ವಿಸ್ತರಿಸಲಾಗಿದೆ. ವಿಶೇಷವೆಂದರೆ ಈ ಯೋಜನೆಯಡಿ ಕೃಷಿ ಹೊಂಡಗಳ ರಚನೆಗೆ ಯಂತ್ರಗಳ ಬಳಕೆಗೆ ಅವಕಾಶವಿರುತ್ತದೆ. ನರೇಗಾದಲ್ಲಿ ಯಂತ್ರಗಳನ್ನು ಬಳಸಿ ಕೃಷಿ ಹೊಂಡಗಳನ್ನು ಮಾಡಲು ಅವಕಾಶ ಇರುವುದಿಲ್ಲ ಎಂದು ಸಿಇಒ ಡಾ. ಎಂ.ಆರ್.ರವಿ ಸ್ಪಷ್ಟನೆ ನೀಡಿದರು.
ಅಧಿಕ ಅರ್ಜಿ ಬಂದರೂ ಅನುದಾನ!
ಜಿಲ್ಲೆಯಲ್ಲಿ ಈಗಾಗಲೇ 250ಕ್ಕೂ ಅಧಿಕ ಅರ್ಜಿಗಳು ಬಂದಿವೆ. ಗುರಿ ಇರುವುದು 700 ಕೃಷಿ ಹೊಂಡಗಳಿಗೆ ಮಾತ್ರ ಆಗಿರುವುದರಿಂದ ಅಧಿಕ ಅರ್ಜಿ ಬಂದರೆ ಮತ್ತೆ ಕೃಷಿಕರನ್ನು ಸತಾಯಿಸಲಾಗುವುದೇ ಎಂದು ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಸೇರಿದಂತೆ ಸದಸ್ಯರನೇಕರು ಸಭೆಯಲ್ಲಿ ಸಂದೇಹ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಅಧಿಕಾರಿ ಕೆಂಪೇಗೌಡ, ಗುರಿಗಿಂತಲೂ ಹೆಚ್ಚಿನ ಅರ್ಜಿಗಳು ಬಂದಲ್ಲಿ ಸರಕಾರದಿಂದ ಅನುದಾನ ತರಿಸಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಸ್ವ ಉದ್ಯೋಗಿಗಳಿಗೆ ಸಾಲ ನೀಡಿಕೆಯಲ್ಲಿ ಬ್ಯಾಂಕ್‌ನಲ್ಲಿ ಅಡಚಣೆ: ಆರೋಪ
ಗ್ರಾಮೀಣ ಭಾಗದ ಕುಶಲಕರ್ಮಿಗಳಿಗೆ ಸ್ವಂತ ಘಟಕ ಆರಂಭಿಸಲು ಮುಂದಾಗಿ ಬ್ಯಾಂಕ್‌ನಲ್ಲಿ ಸಾಲ ಸೌಲಭ್ಯಕ್ಕೆ ಹೋದಾಗ ಅವರನ್ನು ಸತಾಯಿಸಲಾಗುತ್ತದೆ. ತಮ್ಮ ಕ್ಷೇತ್ರದ ಮುರಳಿ ಎಂಬವರನ್ನು ಕಳೆದ ಒಂದು ವರ್ಷದಿಂದ ಸಾಲಕ್ಕಾಗಿ ಅಲೆದಾಡಿಸಲಾಗುತ್ತಿದೆ. ಅವರೀಗ ಕಾರ್ಮಿಕ ಇಲಾಖೆಗೆ ದೂರು ನೀಡಲು ಮುಂದಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಯುವಕರು ಸ್ವ ಉದ್ಯೋಗಕ್ಕೆ ಮುಂದಾಗುವುದು ಹೇಗೆ ಎಂದು ಸದಸ್ಯ ವಿನೋದ್ ಅಸಮಾಧಾನ ವ್ಯಕ್ತಪಡಿಸಿದರು.
ಅರ್ಜಿದಾರರು ಬ್ಯಾಂಕ್‌ನಿಂದ ಸಾಲ ನಿರಾಕರಿಸಿರುವ ಬಗ್ಗೆ ಬರೆದು ಕೊಡಲಿ ಎಂದು ಸದಸ್ಯರಿಗೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಉತ್ತರಿಸಿದಾಗ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬ್ಯಾಂಕ್‌ಗಳಿಂದ ಸಾಲ ನೀಡುವ ಸಂದರ್ಭ ಆಗುತ್ತಿರುವ ತೊಂದರೆಗಳ ಬಗ್ಗೆ ನನಗೂ ದೂರು ಬಂದಿದೆ. ಬ್ಯಾಂಕ್‌ಗಳು ಜನರಿಗೆ ನೆರವು ನೀಡಲು ಇರುವುದು. ಬರೆದು ಕೊಡಿ ಎಂದರೆ ಏನರ್ಥ ಎಂದು ಅಧಿಕಾರಿಯನ್ನು ತರಾಟೆಗೈದರು.
ಈ ವೇಳೆ, ಸದಸ್ಯರನೇಕರು ಬ್ಯಾಂಕ್‌ನಲ್ಲಿ ನಿರುದ್ಯೋಗಿ ಅನಕ್ಷರಸ್ಥರಿಗೆ ಸಾಲ ಸೌಲಭ್ಯದಲ್ಲಿ ಆಗುತ್ತಿರುವ ತೊಂದರೆ ಬಗ್ಗೆ ಸಭೆಯ ಗಮನ ಸೆಳೆದರು.
ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಪ್ರತಿಕ್ರಿಯಿಸಿ, ಬ್ಯಾಂಕ್‌ನಲ್ಲಿ ಎಲ್ಲಾ ಹುದ್ದೆಗಳಲ್ಲಿರುವ ಅಧಿಕಾರಿಗಳೂ ಕನ್ನಡದಲ್ಲೇ ವ್ಯವಹರಿಸುವುದನ್ನು ಕಡ್ಡಾಯಗೊಳಿಸಬೇಕೆಂದು ತಾಕೀತು ಮಾಡಿದರು.
ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಾಹುಲ್ ಹಮೀದ್ ಉಪಸ್ಥಿತರಿದ್ದರು.
ಸಭೆಯ ಆರಂಭದಲ್ಲಿ ಪ್ರಸಕ್ತ ಸಾಲಿನಲ್ಲಿ ಎಸೆಸೆಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಿಗಳಾಗಿ ಹೊರಹೊಮ್ಮಿರುವ ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು.