ಪುತ್ತೂರು ನಗರಸಭೆ: ಸ್ಥಾಯಿ ಸಮಿತಿ ರಚನೆಗೆ ವಿಪಕ್ಷ ಮನವಿ
Update: 2017-07-04 18:37 IST
ಪುತ್ತೂರು,ಜು.4: ಪುತ್ತೂರು ನಗರಸಭೆಯ ದೈನಂದಿನ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿರುವ ಹಿನ್ನಲೆಯಲ್ಲಿ ತಕ್ಷಣವೇ ಸ್ಥಾಯಿ ಸಮಿತಿಯನ್ನು ರಚಿಸಬೇಕು ಎಂದು ವಿಪಕ್ಷದ 15 ಮಂದಿ ಸದಸ್ಯರು ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ವಿಪಕ್ಷ ಸದಸ್ಯರಾದ ವಿಶ್ವನಾಥ ಗೌಡ, ರಾಜೇಶ್ ಬನ್ನೂರು, ಜೀವಂಧರ್ ಜೈನ್ ಸೇರಿದಂತೆ 15 ಮಂದಿ ಮನವಿಗೆ ಸಹಿ ಮಾಡಿದ್ದು, ದಿನಾಂಕ 23-11-2017 ರಂದು ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ನಂಬ್ರ 532ರಂತೆ ಸ್ಥಾಯಿ ಸಮಿತಿಗೆ 7 ಸದಸ್ಯರ ಹೆಸರು ಸೂಚಿಸಲಾತ್ತು. ಆದರೆ ಇಲ್ಲಿಯ ತನಕ ಕಾರ್ಯರೂಪಕ್ಕೆ ಬಂದಿಲ್ಲ. ಸ್ಥಾಯಿ ಸಮಿತಿ ಅಸ್ತಿತ್ವದಲ್ಲಿ ಇಲ್ಲದೆ ನಗರಸಭೆಯ ದೈನಂದಿನ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ.
ಆದ್ದರಿಂದ ಕೂಡಲೇ ತಾವುಗಳು ನಿರ್ಣಯ ಆದಂತೆ ಅಥವಾ ಹೊಸದಾಗಿ ಸ್ಥಾಯಿ ಸಮಿತಿಯನ್ನು ರಚಿಸಲು ತಕ್ಷಣ ನಗರಸಭೆಯ ಕೌನ್ಸೀಲ್ ಸಭೆಯನ್ನು ಕರೆಯಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.