ಉಳ್ಳಾಲ: ಬಾರ್‌ಗಳನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿ ಪ್ರತಿಭಟನೆ
ಉಳ್ಳಾಲ, ಜು. 4: ತೊಕ್ಕೊಟ್ಟಿನ ಹೆದ್ದಾರಿಯಿಂದ ಮೂರು ಬಾರ್‌ಗಳು ಉಳ್ಳಾಲ ಬೈಲಿನ ವಸತಿ ನಿಲಯ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದು, ಕೂಡಲೇ ಮೂರು ಬಾರ್‌ಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ತೊಕ್ಕೊಟ್ಟು ಕೃಷ್ಣನಗರದ ನಾಗರೀಕರು ಉಳ್ಳಾಲ ನಗರಸಭೆ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಉಳ್ಳಾಲ ಪುರಸಭಾ ಮಾಜಿ ಸದಸ್ಯ ಭಗವಾನ್‌ದಾಸ್ ಮಾತನಾಡಿ ಉಳ್ಳಾಲ ಬೈಲಿನಲ್ಲಿ ಸ್ಥಳಾಂತರಗೊಂಡಿರುವ ಬಾರ್‌ನಿಂದಾಗಿ ಕೃಷ್ಣನಗರದ ನಿವಾಸಿಗಳಿಗೆ ತೊಂದರೆ ಉಂಟಾಗಿದೆ. ಸ್ಥಳೀಯ ಶಾಲಾ ಮಕ್ಕಳು ಕೂಡಾ ಮದ್ಯ ಸೇವನೆಯತ್ತ ಆಕರ್ಷಿತರಾಗುವುದನ್ನು ತಪ್ಪಿಸಲು ಕೂಡಲೇ ಬಾರ್‌ಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ಒತ್ತಾಯಿಸಿದರು.
ಉಳ್ಳಾಲ ನಗರ ಪೌರಾಯುಕ್ತೆ ವಾಣಿ ಆಳ್ವರಿಗೆ ಕೃಷ್ಣನಗರದ ನಾಗರಿಕರು ಮನವಿ ಸಲ್ಲಿಸಿದರು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಸುಷ್ಮಾ ಜನಾರ್ದನ್, ಸ್ಥಳೀಯ ಮುಖಂಡರಾದ ಅಜಿತ್ ಉಳ್ಳಾಲ್, ದಯಾನಂದ ತೊಕ್ಕೊಟ್ಟು, ಚಂದ್ರಕಾಂತ್ ಕ್ಲಿಕ್, ಸಚಿನ್ ತೊಕ್ಕೊಟ್ಟು ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.