×
Ad

ಯುವಕರು ಕೃಷಿಯೆಡೆಗೆ ಆಕರ್ಷಿತರಾಗಬೇಕು: ದಿನಕರ ಬಾಬು

Update: 2017-07-04 19:14 IST

ಉಡುಪಿ, ಜು.4: ಪಾರಂಪರಿಕ ಕೃಷಿ ವಿಧಾನದ ಅನುಕರಣೆಯಿಂದ ಹಿಂದೆಲ್ಲಾ ಕೃಷಿಯಲ್ಲಿ ಹೆಚ್ಚಿನ ಇಳುವರಿ ಪಡೆಯಲಾಗದೇ ನಷ್ಟವಾಗುತಿದ್ದರೂ, ಇಂದು ಆಧುನಿಕ ಕೃಷಿ ಪದ್ದತಿಯಿಂದ ಕೃಷಿ ಲಾಭದಾಯಕವಾಗಿದ್ದು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.

 ಮಂಗಳವಾರ ಮಣಿಪುರದ ರೋಟರಿ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಕೃಷಿ ಮತ್ತು ಸಂಬಂಧಿತ ಇಲಾಖೆಗಳು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರೋಟರಿ ಕ್ಲಬ್ ಮಣಿಪುರ, ಸೈಂಟ್ ಆಂತೋನಿ ಚರ್ಚ್ ಕುಂತಳನಗರ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಉಡುಪಿ ಹೋಬಳಿ ಮಟ್ಟದ ‘ಸಮಗ್ರ ಕೃಷಿ ಅಭಿಯಾನ-2017’, ಜಲಜಾಗೃತಿ ವರ್ಷ, ಕೃಷಿಭಾಗ್ಯ ಮಳೆಯಾಶ್ರಿತ ರೈತರಿಗೆ ವರದಾನ, ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಆಧುನಿಕ ಕೃಷಿ ಪದ್ಧತಿಯಿಂದ ವೆಚ್ಚ ಕಡಿಮೆಯಾಗಿ, ಇಳುವರಿ ಅಧಿಕವಾ ಗುತ್ತಿದ್ದು ಕೃಷಿ ಲಾಭದಾಯಕವಾಗಿದೆ. ಯುವ ಜನರಲ್ಲಿ ಕೃಷಿಯೆಡೆಗೆ ಇತ್ತೀಚೆಗೆ ಆಸಕ್ತಿ ಮೂಡುತ್ತಿದೆ. ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಹಾಗೂ ವೈಜ್ಞಾನಿಕ ರೀತಿಯಲ್ಲಿ ಕೃಷಿ ಚಟುವಟಿಕೆ ನಡೆಸಲು ಅಗತ್ಯ ತರಬೇತಿ ನೀಡಲಾಗುತ್ತಿದೆ. ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಯೋಜನೆಗಳ ಪ್ರಯೋಜನ ಪಡೆದು ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಯಲ್ಲಿ ತೊಡಗು ವಂತೆ ದಿನಕರ ಬಾಬು ತಿಳಿಸಿದರು.

ಕೃಷಿಯ ಜೊತೆಗೆ ಪ್ರತಿಯೊಬ್ಬರೂ ಜಲಜಾಗೃತಿ ಕುರಿತು ತಿಳಿದುಕೊಳ್ಳುವ ಅಗತ್ಯವಿದೆ. ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದರೂ ಸಹ ಏಪ್ರಿಲ್-ಮೇ ತಿಂಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ವೈಜ್ಞಾನಿಕ ರೀತಿಯಲ್ಲಿ ಮಳೆ ನೀರು ಸಂಗ್ರಹಿಸುವ ಮತ್ತು ಇಂಗಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಳ್ಳಬಹುದು ಎಂದರು.

 ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್‌ರಾವ್ ಅದ್ಯಕ್ಷತೆ ವಹಿಸಿದ್ದರು. ಮಣಿಪುರ ಗ್ರಾಪಂ ಅಧ್ಯಕ್ಷೆ ಗೀತಾ, ಉಡುಪಿ ತಾಪಂ ಸದಸ್ಯರಾದ ರಜನಿ ಆರ್.ಅಂಚನ್, ಲಕ್ಷ್ಮಿನಾರಾಯಣ, ಮಣಿಪುರರೋಟರಿ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಕಾರ್ಯದರ್ಶಿ ಜೋಸೆಫ್ ಕುಂದರ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಸುಭಾಷಿತ್ ಕುಮಾರ್, ವಂ.ಡೆನಿಸ್ ಡೇಸಾ ಉಪಸ್ಥಿತರಿದ್ದರು.

 ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮೋಹನ್‌ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ್ ಶೇರಿಗಾರ್ ಸ್ವಾಗತಿಸಿಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ರೈತರಿಗೆ ವಿವಿಧ ಆಧುನಿಕ ಕೃಷಿ ಚಟುವಟಿಕೆಗಳ ಕುರಿತು ಮಾಹಿತಿ, ಸಂವಾದ ಹಾಗೂ ವಿವಿಧ ಇಲಾಖೆಗಳಿಂದ ದೊರೆಯುವ ಸವಲತ್ತು ಗಳನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News