×
Ad

ಕಲ್ಲಡ್ಕ ಪ್ರಭಾಕರ ಭಟ್, ಶರಣ್ ಪಂಪ್‌ವೆಲ್ ಬಂಧನಕ್ಕೆ ಜು. 15ರ ಗಡುವು

Update: 2017-07-04 20:24 IST

ಮಂಗಳೂರು, ಜು.4: ಕಲಾಯಿ ನಿವಾಸಿ ಮುಹಮ್ಮದ್ ಅಶ್ರಫ್ ಅವರ ಕೊಲೆ ಪ್ರಕರಣದ ರೂವಾರಿಗಳಾದ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಶರಣ್ ಪಂಪ್‌ವೆಲ್ ಅವರನ್ನು ಜು.15ರೊಳಗೆ ಬಂಧಿಸಬೇಕು. ಇಲ್ಲದಿದ್ದಲ್ಲಿ ಜು.15ರಂದು ‘ಕಲ್ಲಡ್ಕ ಚಲೋ’ ಚಳವಳಿ ಹಮ್ಮಿಕೊಳ್ಳುವುದಾಗಿ ಎಸ್‌ಡಿಪಿಐ ದ.ಕ. ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಜಿಲ್ಲಾಡಳಿತ ಮತ್ತು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರತಿ ಕೋಮುದಳ್ಳುರಿ ಹಾಗೂ ಕೊಲೆಗಳ ಹಿಂದಿನ ರೂವಾರಿ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಶರಣ್ ಪಂಪ್‌ವೆಲ್ ಎಂಬುದು ಜನಸಾಮಾನ್ಯರಲ್ಲಿ ಚರ್ಚೆಯಲ್ಲಿದೆ. ಜಿಲ್ಲೆಯಲ್ಲಿ ಕಳೆದ ಮೂರು ದಶಕಗಳಲ್ಲಿ ನಡೆದಿರುವ ಘಟನೆಗಳನ್ನು ಗಮನಿಸುವಾಗ ಇದರ ತಾಣವೇ ಕಲ್ಲಡ್ಕ ಎಂಬುದು ಸ್ಪಷ್ಟವಾಗುತ್ತಿದೆ. ಬಂಟ್ವಾಳ ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಎಂಟು ಕೊಲೆ ಪ್ರಕರಣಗಳ ಹಿನ್ನೆಲೆಯನ್ನು ನೋಡಿದರೆ ಆರೋಪಿಗಳು ಪ್ರಭಾಕರ ಭಟ್‌ರ ಆಪ್ತರಾಗಿಯೇ ಬೆಳೆದುಬಂದವರು. ಕೋಮುಗಲಭೆ, ಕೊಲೆ, ಹಿಂಸಾಚಾರ ಹಾಗೂ ನೈತಿಕ ಪೊಲೀಸ್‌ಗಿರಿಗಳಂತಹ ಘಟನೆಗಳು ಇನ್ನು ಮುಂದೆಯೂ ದ.ಕ. ಜಿಲ್ಲೆಯಲ್ಲಿ ಮರುಕಳಿಸುವುದರಲ್ಲಿ ಸಂದೇಹವಿಲ್ಲ. ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕಾದರೆ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಶರಣ್ ಪಂಪ್‌ವೆಲ್ ಅವರ ಬಂಧನವಾಗಬೇಕು. ಇವರನ್ನು ಬಂಧಿಸಿದರೆ ಮಾತ್ರ ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದ ನೆಲೆಸಲು ಸಾಧ್ಯವಿದೆ ಎಂದರು.

ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆಗಳನ್ನು ಅವಲೋಕಿಸಿದರೆ, ಎಲ್ಲಾ ಕೊಲೆ ಪಾತಕಗಳು, ಕೋಮುಗಲಭೆಗಳು, ಚೂರಿ ಇರಿತ ಪ್ರಕರಣಗಳ ಹಿಂದೆ ಕಲ್ಲಡ್ಕ ಪ್ರಭಾಕರ ಭಟ್‌ ಶಾಮೀಲಾತಿ ಕಾಣುತ್ತಿದೆ. ದಶಕಗಳ ಹಿಂದೆ ನಡೆದ ಕಲ್ಲಡ್ಕದ ಎಂ.ಕೆ.ಇಸ್ಮಾಯೀಲ್ ಕೊಲೆ ಆರೋಪಿಯೂ ಕಲ್ಲಡ್ಕ ಪ್ರಭಾಕರ ಭಟ್ ಆಗಿದ್ದಾರೆ. ನಂತರ ನಡೆದ ಯೂಸುಫ್ ಕೊಲೆಯಲ್ಲೂ ಭಟ್‌ ಆಪ್ತ ರತ್ನಾಕರ ಶೆಟ್ಟಿ ಪ್ರಮುಖ ಆರೋಪಿಯಾಗಿದ್ದಾನೆ. ಅನಂತರ ನಡೆದ ಹಲವು ಅಹಿತಕರ ಘಟನೆ ಹಾಗೂ ಕೋಮುಗಲಭೆಗಳ ರೂವಾರಿಯೂ ರತ್ನಾಕರ ಶೆಟ್ಟಿಯಾಗಿದ್ದು, ಬದ್ರುದ್ದೀನ್ ಬ್ರಹ್ಮರಕೂಟ್ಲು ಹಾಗೂ ಹರೀಶ್ ಪೂಜಾರಿ ಹತ್ಯೆಗೈದ ಆರೋಪಿಯಾಗಿರುವ ಮಿಥುನ್ ಪೂಜಾರಿ ಕೂಡ ಕಲ್ಲಡ್ಕ ಪ್ರಭಾಕರ ಭಟ್ ಗರಡಿಯಲ್ಲಿ ಬೆಳೆದು ಬಂದಿರುವ ಶಿಷ್ಯನಾಗಿದ್ದಾನೆ.

ಮಿಥುನ್ ಪೂಜಾರಿ ಮೇಲೆ ಹಲವು ಪ್ರಕರಣಗಳಿದ್ದು, ರೌಡಿ ಶೀಟರ್ ಕೂಡ ಆಗಿದ್ದಾನೆ. ಮೇ 25ರಂದು ಕಲ್ಲಡ್ಕದಲ್ಲಿ ಮುಸ್ಲಿಂ ಯುವಕರಿಗೆ ಚೂರಿ ಇರಿದು ಕೊಲೆಗೆ ಯತ್ನಿಸಿದ ಪ್ರಕರಣದ ರೂವಾರಿ ಇದೇ ಮಿಥುನ್ ಪೂಜಾರಿಯಾಗಿದ್ದು, ಆತನ ಬಂಧನ ಈವರೆಗೆ ಆಗಿಲ್ಲ. ಬಂಟ್ವಾಳದ ರಿಕ್ಷಾ ಚಾಲಕ ಇಕ್ಬಾಲ್ ಕೊಲೆಯ ಆರೋಪಿಗಳು ಇದೇ ತಂಡದವರಾಗಿದ್ದು, ನಾಸಿರ್ ಸಜಿಪ ಎಂಬವರನ್ನು ಕೊಲೆಗೈದವರು ಕೂಡ ಕಲ್ಲಡ್ಕ ಕುಕ್ಕಾಜೆ ಪರಿಸರದ ಸಂಘಪರಿವಾರದ ಕಾರ್ಯಕರ್ತರಾಗಿದ್ದಾರೆ. ಜಲೀಲ್ ಕರೋಪಾಡಿಯನ್ನು ಹತ್ಯೆಗೈದ ಪ್ರಮುಖ ಆರೋಪಿಯಾದ ನರಸಿಂಹ ಶೆಟ್ಟಿ ಮಾಣಿ ಪ್ರಭಾಕರ ಭಟ್‌ ಆಪ್ತನಾಗಿದ್ದು, ಮುಹಮ್ಮದ್ ಅಶ್ರಫ್‌ರ ಕೊಲೆಗೈದವರು ಕೂಡ ಪ್ರಭಾಕರ ಭಟ್ ಮತ್ತು ಶರಣ್ ಪಂಪ್‌ವೆಲ್‌ ಆಪ್ತರಾಗಿದ್ದಾರೆ.

ಅಶ್ರಫ್ ಕೊಲೆ ಪ್ರಕರಣದಲ್ಲಿ ಆರು ಆರೋಪಿಗಳನ್ನು ಬಂಧಿಸಿದ್ದು ಇನ್ನೋರ್ವ ಆರೋಪಿ ಭರತ್ ಕುಮ್ಡೇಲು ಬಂಧಿಸುವ ಮೂಲಕ ಕೊಲೆ ಮಾಸ್ಟರ್ ಮೈಂಡ್‌ನ್ನು ಬಂಧಿಸಿರುವುದಾಗಿ ಪೊಲೀಸರು ಹೇಳುತ್ತಿದ್ದಾರೆ. ಅಶ್ರಫ್ ಕೊಲೆ ಸಹಿತ ಈ ಹಿಂದೆ ನಡೆದಿರುವ ಕೊಲೆಗಳ ಮಾಸ್ಟರ್ ಮೈಂಡ್ ಯಾರೆಂಬುದು ಜನತೆಗೆ ಗೊತ್ತಾಗಲು ನೈಜ ಆರೋಪಿಗಳ ಬಂಧನವಾಗಬೇಕು ಎಂದು ಇಕ್ಬಾಲ್ ಬೆಳ್ಳಾರೆ ಒತ್ತಾಯಿಸಿದರು.

ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಂ.ಅಥಾವುಲ್ಲಾ ಮಾತನಾಡಿ, ಅಶ್ರಫ್ ಕೊಲೆ ಪ್ರಕರಣದ ಮಾಸ್ಟರ್ ಮೈಂಡ್ ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಶರಣ್ ಪಂಪ್‌ವೆಲ್‌ರನ್ನು ಜು.15ರೊಳಗೆ ಬಂಧಿಸಿ, ಕೊಲೆಯ ಹಿಂದಿನ ಷಡ್ಯಂತ್ರ ಬಯಲಾಗಬೇಕು. ಇಲ್ಲದಿದ್ದರೆ ಜು.15ರಂದು ಹಮ್ಮಿಕೊಂಡಿರುವ ಚಳವಳಿಯ ರೂಪುರೇಷೆಗಳನ್ನು ಬಹಿರಂಗ ಪಡಿಸುವುದಾಗಿ ಅವರು ಜಿಲ್ಲಾಡಳಿತ ಮತ್ತು ಸರಕಾರವನ್ನು ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಇಸ್ಮಾಯೀಲ್ ಆಲಡ್ಕ ಮತ್ತು ಜಿಲ್ಲಾ ಸಮಿತಿ ಸದಸ್ಯ ಶಾಹುಲ್ ಎಸ್.ಎಚ್. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News