'ನೀರಿಗಾಗಿ ಅರಣ್ಯ' ಕಾರ್ಯಕ್ರಮ

Update: 2017-07-04 15:18 GMT

ಬೆಳ್ತಂಗಡಿ, ಜು.4: ಮಾನವರ ಹಾಗೂ ಪ್ರಾಣಿ ಸಂಕುಲದ ಉಳಿವಿಗಾಗಿ ನೀರು ಅಗತ್ಯ ಇದೀಗ ಭೂಮಿಯಲ್ಲಿ ನೀರು ಬರಿದಾಗುತ್ತಿದ್ದು ನೀರಿನ ಮೂಲವನ್ನು ಹೆಚ್ಚಿಸಲು ಅರಣ್ಯ ಉಳಿಸುವ ಮತ್ತು ಬೆಳೆಸುವ ಕಾರ್ಯ ಎಲ್ಲರಿಂದ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಅವರು, ಬಳ್ಳಮಂಜುದ ದೇವಸ್ಥಾನದ ಅನ್ನಛತ್ರದಲ್ಲಿ ಕರ್ನಾಟಕ ಅರಣ್ಯ ಇಲಾಖೆಯ ಮಂಗಳೂರು ವಿಭಾಗ, ಉಪವಿಭಾಗ, ಬೆಳ್ತಂಗಡಿ ವಲಯ ಹಾಗೂ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಬಳ್ಳಮಂಜ, ಮತ್ತು ಬೆಳ್ತಂಗಡಿ ತಾಲೂಕು ಮರದ ವ್ಯಾಪಾರಸ್ಥರು ಮತ್ತು ಸಾಮಿಲ್ಲು ಮಾಲಕರ ಸಂಘದ ಆಶ್ರಯದಲ್ಲಿ ಕೋಟಿ ವೃಕ್ಷ ಆಂದೋಲನದ ಅಂಗವಾಗಿ ನಡೆದ ನೀರಿಗಾಗಿ ಅರಣ್ಯ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾವು ಅರಣ್ಯ ರಕ್ಷಕರಾಗಬೇಕೇ ಹೊರತು ಭಕ್ಷಕರಾಗಬಾರದು. ಶೇ. 70 ರಿಂದ 80 ಭಾಗದ ಅರಣ್ಯ ಪ್ರದೇಶ ಕಂದಾಯ ಇಲಾಖೆಯಲ್ಲಿ ಗುರುತಿಸಲ್ಪಟ್ಟಿದೆ. ಅರಣ್ಯ ಸಂರಕ್ಷಣಾ ಉದ್ಧೇಶದಿಂದ ಅದನ್ನು ಅರಣ್ಯವಾಗಿಯೇ ಇರಬೇಕು. ಜನವಸತಿಗಾಗಿ ಭೂ ಬಳಕೆ ಹೆಚ್ಚುತ್ತಿದೆ. ಕಾಡು ಉಳಿಸಲು ಅನೇಕ ಯೋಜನೆಗಳನ್ನು ಸರಕಾರ ತಂದಿದೆ. ಇದರಿಂದ ವನ ಸಂರಕ್ಷಣೆ ಆಗಿದೆ. ಇಲಾಖೆಯ ವತಿಯಿಂದ ಗಿಡ ನಡೆಯುವ ಕಾರ್ಯ ನಡೆಯುತ್ತಿದ್ದ ಇದಕ್ಕೆ ಸಾರ್ವಜನಿಕರೂ ಕೈ ಜೋಡಿಸಿದಾಗ ಮಾತ್ರ ಇಲಾಖೆಯ ಆಂದೋಲನ ಯಶಸ್ವಿಯಾಗಲು ಸಾಧ್ಯ, ಈ ಅಭಿಯಾನದಲ್ಲಿ ಈ ವರ್ಷ ಸಣ್ಣ ಗಿಡಗಳನ್ನು ನೆಟ್ಟರೆ ನಾಶವಾಗುತ್ತದೆ ಎಂಬ ದೃಷ್ಟಿಯಿಂದ ಸಾಕಷ್ಟು ದೊಡ್ಡ ಗಿಡಗಳನ್ನು ನೆಡುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಶಾಸಕ ಕೆ. ವಸಂತ ಬಂಗೇರ ಅಧ್ಯಕ್ಷತೆ ವಹಿಸಿ, ಮಾನವ ನಿರಂತರವಾಗಿ ಅರಣ್ಯ ನಾಶ ಮಾಡುತ್ತಾ ಬಂದಿದ್ದಾನೆ ಇದರಿಂದ ನೀರಿಗೂ ಬರಗಾಲ ಉಂಟಾಗಿದೆ. ಅರಣ್ಯವನ್ನು ಸಂರಕ್ಷಿಸುವುದರೊಂದಿಗೆ ಪ್ರತಿಯೊಬ್ಬರೂ ನೀರಿಂಗಿಸುವ ಕೆಲಸ ಮಾಡಬೇಕು. ಅರಣ್ಯಗಳು ಸ್ವಾಭಾವಿಕವಾಗಿ ಈ ಕಾರ್ಯವನ್ನು ಮಾಡುತ್ತವೆ, ಇದಕ್ಕಾಗಿ ಸರಕಾರವು ಇಂಗು ಗುಂಡಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಜನರು ಇದರೊಂದಿಗೆ ಕೈಜೋಡಿಸಿ ಅರಣ್ಯ ಬೆಳೆಸುವ ಹಾಗೂ ನೀರಿಂಗಿಸುವ ಕಾರ್ಯ ಮಾಡಬೇಕು ಎಂದರು.

ಮಚ್ಚಿನ ಗ್ರಾ.ಪಂ. ಅಧ್ಯಕ್ಷೆ ಹರ್ಷಲತಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎನ್. ಸತೀಶ್ ಬಾಬಾ ರೈ, ಸಾಮಿಲ್ಲು ಸಂಘದ ಅಧ್ಯಕ್ಷ ಎಂ. ರಾಜೇಶ್ ಪ್ರಭು, ನಿವೃತ್ತ ಅರಣ್ಯ ವಲಯಾಧಿಕಾರಿ ಸುಂದರ ಶೆಟ್ಟಿ ವೇದಿಕೆಯಲ್ಲಿದ್ದರು.
 ಬಳ್ಳಮಂಜ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಎಂ.ಹರ್ಷ ಸಂಪಿಗೆತ್ತಾಯ ಸ್ವಾಗತಿಸಿದರು. ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಬಿ. ಸುಬ್ಬಯ್ಯ ನಾಯ್ಕ ವಂದಿಸಿದರು. ಪ್ರೇಮದಾಸ ಸಿಕ್ವೇರಾ ಹಾಗೂ ಸತೀಶ್ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News