ಮದುವೆ ನೋಂದಣಿ, ಆಧಾರ್ ಜೋಡಣೆ ಕಡ್ಡಾಯ: ಕಾನೂನು ಸಮಿತಿ ಶಿಫಾರಸು

Update: 2017-07-04 15:29 GMT

ಹೊಸದಿಲ್ಲಿ, ಜು.4: ದಾಖಲೆಗಳನ್ನು ಸಾರ್ವತ್ರಿಕವಾಗಿ ಪತ್ತೆ ಹಚ್ಚಲು ಅನುಕೂಲವಾಗುವಂತೆ ಮದುವೆಯನ್ನು ನೋಂದಣಿಗೊಳಿಸಿ ಅವನ್ನು ಆಧಾರ್‌ನೊಂದಿಗೆ ಜೋಡಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಭಾರತದ ಕಾನೂನು ಆಯೋಗ ಶಿಫಾರಸು ಮಾಡಿದೆ.

ಮದುವೆಯನ್ನು ನೋಂದಣಿಗೊಳಿಸಿ ಅದನ್ನು ಆಧಾರ್‌ನೊಂದಿಗೆ ಜೋಡಿಸಿದರೆ ಯಾವುದೇ ಸ್ಥಳದಲ್ಲೂ ದಾಖಲೆಯನ್ನು ಪರಿಶೀಲಿಸಬಹುದು ಎಂದು ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ. ಅಲ್ಲದೆ ವಿವಾಹವಾದ ಒಂದು ತಿಂಗಳೊಳಗೆ ಅದನ್ನು ನೋಂದಣಿ ಮಾಡಿಕೊಳ್ಳಬೇಕು. ತಪ್ಪಿದರೆ ದಿನಕ್ಕೆ 5 ರೂ.ನಂತೆ ದಂಡ ವಿಧಿಸಬೇಕು ಎಂದು ಸಮಿತಿ ತಿಳಿಸಿದೆ.

   ಜನ್ಮ, ಮದುವೆ ಅಥವಾ ಮರಣದ ಬಗ್ಗೆ ನಿರ್ದಿಷ್ಟ ಕಾಲಮಿತಿಯೊಳಗೆ ನೋಂದಣಿ ಮಾಡಿಕೊಳ್ಳಬೇಕು. ತಪ್ಪಿದರೆ ನೋಂದಣಾಧಿಕಾರಿ ವಿಳಂಬ ಶುಲ್ಕ ವಿಧಿಸಬೇಕು. ಹುಟ್ಟಿದ / ಮೃತಪಟ್ಟ ದಿನಾಂಕವನ್ನು 30 ದಿನದೊಳಗೆ , ಅಥವಾ ಒಂದು ವರ್ಷದೊಳಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಲಿಖಿತ ಒಪ್ಪಿಗೆ ಪಡೆದು ನೋಂದಾಯಿಸಿಕೊಳ್ಳಬಹುದು.ಒಂದು ವರ್ಷದ ಬಳಿಕ ಪ್ರಥಮ ದರ್ಜೆ ನ್ಯಾಯಾಧೀಶರ ಆದೇಶದ ಬಳಿಕವಷ್ಟೇ ನೋಂದಾವಣೆ ಮಾಡಿಕೊಳ್ಳಬಹುದು. ಮದುವೆಯ ನೋಂದಣಿ ಪ್ರಕ್ರಿಯೆಯನ್ನು ಸಕಾರಣವಿಲ್ಲದೆ ವಿಳಂಬ ಮಾಡಿದರೆ ದಿನಕ್ಕೆ 5 ರೂ.ಯಂತೆ ದಂಡ ವಿಧಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

  ಪ್ರಸಕ್ತ ಇರುವ ಕೌಟುಂಬಿಕ ಕಾನೂನನ್ನು ರದ್ದುಪಡಿಸುವ ಅಥವಾ ತಿದ್ದುಪಡಿ ಮಾಡುವ ಉದ್ದೇಶವಿಲ್ಲ. ಈ ಮಸೂದೆ ಹಾಲಿ ಕಾನೂನಿಗೆ ಪೂರಕವಾಗಿದೆ. ಯಾವುದೇ ಧಾರ್ಮಿಕ/ಸಾಂಸ್ಕೃತಿಕ ಆಚರಣೆಯನ್ನು ರದ್ದುಪಡಿಸುವ ಉದ್ದೇಶವಿಲ್ಲ. ಜನನ ಮತ್ತು ಮರಣ ನೋಂದಣಾಧಿಕಾರಿಯೇ ವಿವಾಹ ನೋಂದಣಾಧಿಕಾರಿ ಆಗಿರುತ್ತಾರೆ ಎಂದು ಸಮಿತಿ ತಿಳಿಸಿದೆ.ಜನನ ಮತ್ತು ಮರಣ ಕಾಯ್ದೆ 1969ಕ್ಕೆ ತಿದ್ದುಪಡಿ ತಂದು ವಿವಾಹದ ನೋಂದಣಿಯನ್ನು ಕಡ್ಡಾಯಗೊಳಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News