ಕೆ.ಸಿ.ರೋಡ್: ಬ್ಯಾಂಕ್ ದರೋಡೆ ಯತ್ನ ಪ್ರಕರಣ: ಬಂಧಿತರು ಸಿಸಿಬಿ ಪೊಲೀಸರ ವಶ

Update: 2017-07-04 15:36 GMT

ಉಳ್ಳಾಲ, ಜು. 4: ತಲಪಾಡಿ ಸಮೀಪದ ಕೆ.ಸಿ.ರೋಡ್ ಜಂಕ್ಷನ್‌ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖೆಗೆ ಕಳೆದ ಜೂ.23ರಂದು ಹೆಲ್ಮೆಟ್ ಧರಿಸಿ ನುಗ್ಗಿ ಚಿನ್ನಾಭರಣವನ್ನು ದರೋಡೆಗೈಯ್ಯಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಪಿಲಾರು, ದಾರಂದಬಾಗಿಲು ನಿವಾಸಿ ರಾಮಚಂದ್ರ ಯಾನೆ ಬೋಟ್ ರಾಮ (58) ಮತ್ತು ಪ್ರಕಾಶ್ ನಗರ ನಿವಾಸಿ ಮೋಹನ್ ಚಿಟ್ಟಿಯಾರ್ (46) ಎಂದು ಗುರುತಿಸಲಾಗಿದೆ.

ಪಿಲಾರು, ದಾರಂದ ಬಾಗಿಲಿನ ರಾಮಚಂದ್ರ ಸೋಮೇಶ್ವರ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯರಾಗಿದ್ದು ಲಕ್ಷಾಂತರ ರೂ. ಮೌಲ್ಯದ ಚಿಟಿ ಫಂಡ್ ಮತ್ತು ಫೈನಾನ್ಸ್ ವ್ಯವಹಾರವನ್ನು ನಡೆಸುತ್ತಿದ್ದರೆನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ವ್ಯವಹಾರದಲ್ಲಿ ಕೈಸುಟ್ಟುಕೊಂಡಿದ್ದ ಬೋಟ್ ರಾಮಣ್ಣ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಕೆ.ಸಿ.ರೋಡ್‌ನ ಶಾಖೆಯನ್ನು ದರೋಡೆ ಮಾಡಲು ಪ್ಲ್ಯಾನ್ ರೆಡಿ ಮಾಡಿದ್ದರು ಎನ್ನಲಾಗಿದೆ.

ಇದಕ್ಕಾಗಿ ತನ್ನ ಸ್ನೇಹಿತ ಮೋಹನ್ ಚೆಟ್ಟಿಯಾರನ್ನು ಬಳಸಿಕೊಂಡು ಕಳೆದ ಜೂ.23 ರಂದು ಮಧ್ಯಾಹ್ನ ಹೆಲ್ಮೆಟ್ ಧರಿಸಿ ಬ್ಯಾಂಕಿಗೆ ನುಗ್ಗಿದ್ದು ಒಳಗಿದ್ದ ಮೂವರು ಸಿಬ್ಬಂದಿಗಳನ್ನು ಟಾಯ್ಲೆಟಲ್ಲಿ ಕೂಡಿ ಹಾಕಿ ಲಾಕರ್‌ನಲ್ಲಿದ್ದ ಸುಮಾರು ಆರು ಕೋಟಿಗೂ ಅಧಿಕ ಬೆಳೆಬಾಳುವ 25 ಕೆ.ಜಿ ಚಿನ್ನವನ್ನು ಎಗರಿಸಿ ಬೈಕಿನಲ್ಲಿ ಓಡಲೆತ್ನಿಸಿದಾಗ ಬೆನ್ನಟ್ಟಿದ್ದ ಸರಪ್ಪ ಎಂಬುವವರು ಇಬ್ಬರಿಗೂ ಕಲ್ಲಿನಲ್ಲಿ ಹೊಡೆದ ಪರಿಣಾಮ ಚಿನ್ನದ ಗೋಣಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು.

ಬ್ಯಾಂಕಿನ ಹತ್ತಿರದ ಶಾಪ್‌ಗಳ ಸಿಸಿ ಕೆಮರಾ ದೃಶ್ಯಗಳ ಆಧಾರದಲ್ಲಿ ಪರಿಶೀಲನೆ ನಡೆಸಿದ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದರು. ಪ್ರಮುಖ ಆರೋಪಿ ಬೋಟ್ ರಾಮ ಆರೂವರೆ ಅಡಿ ಎತ್ತರದ ಧೃಢಕಾಯದವರಾಗಿದ್ದು, ಬ್ಯಾಂಕ್‌ನ ಸಿಬ್ಬಂದಿ, ಇನ್ನಿತರ ಪದಾಧಿಕಾರಿಗಳಲ್ಲಿ ಸಿಸಿ ಕ್ಯಾಮೇರ ಫೂಟೇಜಿನ ಹೆಲ್ಮೆಟ್ ಧಾರಿ ವ್ಯಕ್ತಿಗಳಿಬ್ಬರನ್ನು ತೋರಿಸಿದಾಗ ಧೃಢಕಾಯದ ವ್ಯಕ್ತಿಯನ್ನು ಅನೇಕರು ಬೋಟ್ ರಾಮರೇ ಇರಬಹುದೆಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನ್ನ ಪತ್ನಿ ಬ್ಯಾಂಕಿನ ಮಾಜಿ ನಿರ್ದೇಶಕಿಯಾಗಿದ್ದರಿಂದ ಬೋಟ್ ರಾಮ ಬ್ಯಾಂಕಿನ ಸಿಬ್ಬಂದಿಗಳ ಜೊತೆ ಒಡನಾಟ ಹೊಂದಿದ್ದರೆನ್ನಲಾಗಿದೆ. ಸಿಸಿಬಿ ಪೊಲೀಸರು ಬಂಧಿತ ಆರೋಪಿಗಳನ್ನು ಮಂಗಳವಾರ ಸಂಜೆ ಹೆಚ್ಚಿನ ವಿಚಾರಣೆಗಾಗಿ ಉಳ್ಳಾಲ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News