ಎಟಿಎಂ ಕಳವುಗೈದು 3.59 ಲಕ್ಷ ರೂ. ಡ್ರಾ: ಆರೋಪಿಗಳಿಬ್ಬರ ಬಂಧನ
ಮಂಗಳೂರು, ಜು. 4: ನಗರದ ಪಳ್ನೀರ್‌ನ ವೃದ್ಧ ಮಹಿಳೆಯೊಬ್ಬರ ಎಟಿಎಂ ಕಾರ್ಡ್ ಕಳವುಗೈದು 3,59,000 ರೂ. ಹಣ ಡ್ರಾ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ವೆಲ್ಲೋರ ನಿವಾಸಿಗಳಾದ ಫಾತಿಮಾ (28) ಹಾಗೂ ಸೆಲ್ವಂ (31) ಅವರನ್ನು ಬಂಧಿಸಿ ಅವರಲ್ಲಿದ್ದ 2.20 ಲಕ್ಷ ರೂ. ಹಾಗೂ ಎಟಿಎಂನಿಂದ ಡ್ರಾ ಮಾಡಿದ ಹಣದಿಂದ ಖರೀದಿಸಿದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.
ಪಳ್ನೀರ್‌ನ ಬ್ರಿಟ್ಟೋ ಲೇನ್‌ನ ಜೋಸಿ (70) ಅವರ ಮನೆಯಿಂದ ಎಟಿಎಂ ಕಳವುಗೈದು ಪರಾರಿಯಾಗಿದ್ದರು. ಫಾತಿಮಾ ಕೆಲವು ವರ್ಷಗಳಿಂದ ಜೋಸಿ ಅವರ ಮನೆಯಲ್ಲಿ ಕೆಲಸಕ್ಕಿದ್ದರು. ಬಳಿಕ ಈಕೆ ಮನೆ ಕೆಲಸವನ್ನು ಬಿಟ್ಟದ್ದಳು. ಮನೆಯಿಂದ ಹೊರಡುವಾಗ ಈಕೆ ಎಟಿಎಂವನ್ನು ಕಳವುಗೈದಿದ್ದಳು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್‌ಸ್ಪೆಕ್ಟರ್ ಬೆಳ್ಳಿಯಪ್ಪ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.