ಪರಿಶಿಷ್ಟ ಜಾತಿ ಕಾಲನಿಯಲ್ಲಿ ಮದ್ಯದಂಗಡಿ ತೆರೆಯಲು ವಿರೋಧ
ಬ್ರಹ್ಮಾವರ, ಜು.4: ಇಲ್ಲಿನ ವಾರಂಬಳ್ಳಿ ಹಾಗೂ ಹಾರಾಡಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿ ಪ್ರದೇಶದಲ್ಲಿ ಬಾರ್ ಎಂಡ್ ರೆಸ್ಟೋರೆಂಟ್ ತೆರೆಯಲು ಪ್ರಭಾವಿ ವ್ಯಕ್ತಿಗಳು ನಡೆಸುತ್ತಿರುವ ಪ್ರಯತ್ನವನ್ನು ಗ್ರಾಮಸ್ಥರು ವಿರೋಧಿಸುತಿದ್ದಾರೆ.
ಯಾವುದೇ ಕಾರಣಕ್ಕೂ ಇಲ್ಲಿ ಬಾರ್ ತೆರೆಯಲು ಅವಕಾಶ ನೀಡಬಾರದು ಎಂದು ಹಾರಾಡಿಯ ಮಾಜಿ ತಾಪಂ ಉಪಾಧ್ಯಕ್ಷೆ ಭಾಗ್ಯಲಕ್ಷ್ಮಿ ಹಾಗೂ ಹಾರಾಡಿ ನೇತಾಜಿ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಕುಮಾರ್ ಎಸ್. ತಿಳಿಸಿದ್ದಾರೆ.
ವಾರಂಬಳ್ಳಿ ಗ್ರಾಮದ ಸರ್ವೇ ನಂಬರ್ 187 ಹಾಗೂ ಹಾರಾಡಿ ಗ್ರಾಮದ ಸರ್ವೆ ನಂಬರ್ 100,101 ಮತ್ತು 105ರ ಸುಮಾರು 13 ಎಕರೆಗೂ ಅಧಿಕ ಜಾಗ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಮನೆ ನಿವೇಶನಕ್ಕಾಗಿ ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದಾರೆ. ಇಲ್ಲಿ 30ಕ್ಕೂ ಅಧಿಕ ಕುಟುಂಬಗಳು ವಾಸವಾಗಿದೆ. ಇವುಗಳೆಲ್ಲವೂ ಒಂದಂಕ್ಕೊಂದು ಹೊಂದಿಕೊಂಡಿವೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಲ್ಲಿನ ನಿವಾಸಿಗಳ ಹಾಗೂ ಸಂಘದ ಪ್ರಯತ್ನದ ಫಲವಾಗಿ ಇದೀಗ ವಾರಂಬಳ್ಳಿ ಮತ್ತು ಹಾರಾಡಿ ಗ್ರಾಪಂಗಳ ಶಿಫಾರಸ್ಸಿನಂತೆ ಸಮಾಜ ಕಲ್ಯಾಣ ಇಲಾಖೆ ಈ ಸರ್ವೆ ನಂಬರ್‌ಗಳ ಜಾಗವನ್ನು ಪರಿಶಿಷ್ಟ ಜಾತಿ ಕಾಲೋನಿ ಎಂದು ಘೋಷಿಸಲು ಬೇಕಾದ ಕ್ರಮಕೈಗೊಳ್ಳಲು ಮುಂದಾಗಿದೆ.
ಈ ನಡುವೆ ವಾರಂಬಳ್ಳಿ ಗ್ರಾಮದ ಸರ್ವೆ ನಂ.187ರಲ್ಲಿರುವ ಕಟ್ಟಡದಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲು ಪ್ರಭಾವ ವ್ಯಕ್ತಿಗಳು ಪ್ರಯತ್ನ ನಡೆಸುತ್ತಿರುವ ಬಗ್ಗೆ ತಿಳಿದುಬಂದಿದ್ದು, ಅಬಕಾರಿ ಕಾಯ್ದೆ 5(1)ರ ಪ್ರಕಾರ ಪರಿಶಿಷ್ಟ ವರ್ಗದ ಜನರು ಹೆಚ್ಚಿರುವ ಪ್ರದೇಶದಲ್ಲಿ ಅಬಕಾರಿ ಪರವಾನಿಗೆ ನೀಡಲು ಅವಕಾಶವಿಲ್ಲ. ಇದನ್ನು ರಾಜ್ಯ ಉಚ್ಛ ನ್ಯಾಯಾಲಯವೂ ಎತ್ತಿ ಹಿಡಿದಿದೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಬಾರ್‌ಗೆ ಅನುಮತಿ ನೀಡಬಾರದೆಂದು ಹಲವು ಬಾರಿ ಜಿಲ್ಲಾಧಿಕಾರಿಗಳಿಗೆ ಹಾಗೂ ಅಬಕಾರಿ ಉಪ ಆಯುಕ್ತರಿಗೆ ಮನವಿ ಸಲ್ಲಿಸಿದ್ದರೂ, ಇದೀಗ ಹೊಸ ಕಾನೂನಿನಂತೆ ಮುಚ್ಚಿರುವ ಬಾರೊಂದನ್ನು ಇಲ್ಲಿಗೆ ಸ್ಥಳಾಂತರಿಸಲು ಪ್ರಯತ್ನ ನಡೆಯುತ್ತಿರುವ ಬಗ್ಗೆ ತಿಳಿದುಬಂದಿದೆ. ನಮ್ಮ ವಿರೋಧವನ್ನು ಲೆಕ್ಕಿಸದೇ ಬಾರ್‌ಗೆ ಪರವಾನಿಗೆ ನೀಡಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಕುಮಾರ್ ಹಾಗೂ ಭಾಗ್ಯಲಕ್ಷ್ಮಿ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.