ಮನೆಬಳಕೆ ಎಲ್‌ಪಿಜಿ ಮೇಲೆ ಜಿಎಸ್‌ಟಿ: ಹಿಂದೆ ತೆಗೆಯಲು ಕಾಂಗ್ರೆಸ್ ಆಗ್ರಹ
Update: 2017-07-04 21:49 IST
ಹೊಸದಿಲ್ಲಿ, ಜು. 4: ಬಡವರಿಗೆ ಹೊರೆಯಾಗುವುದರಿಂದ ಮನೆಬಳಕೆಯ ಎಲ್‌ಪಿಜಿ ಸಿಲಿಂಡರ್ ಮೇಲೆ ವಿಧಿಸಿರುವ ಶೇ. 5 ಜಿಎಸ್‌ಟಿ ರದ್ದುಗೊಳಿಸಬೇಕು ಎಂದು ಕಾಂಗ್ರೆಸ್ ಮಂಗಳವಾರ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.
ಜಿಎಸ್‌ಟಿ ಜಾರಿಗೊಂಡ ಬಳಿಕ ದೇಶದ ವಿವಿಧ ಭಾಗಗಳಲ್ಲಿ ಮನೆ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 32 ರೂಪಾಯಿ ಹೆಚ್ಚಾಗಿದೆ. ಇದು ಸಾಮಾನ್ಯ ಜನರಿಗೆ, ಮುಖ್ಯವಾಗಿ ಬಡ ಜನರಿಗೆ ಹೊರೆ. ಮನೆಬಳಕೆಯ ಎಲ್‌ಪಿಜಿ ಸಿಲಿಂಡರ್ ಮೇಲೆ ವಿಧಿಸಲಾಗಿರುವ ಜಿಎಸ್‌ಟಿಯನ್ನು ಕೂಡಲೇ ರದ್ದುಗೊಳಿಸಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದು ಎಐಸಿಸಿ ವಕ್ತಾರ ಅಜಯ್ ಮಾಕೇನ್ ಹೇಳಿದ್ದಾರೆ.
ಮನೆಬಳಕೆ ಎಲ್‌ಪಿಜಿ ಮೇಲೆ ಶೇ. 5 ಜಿಎಸ್‌ಟಿ ವಿಧಿಸಲಾಗಿದೆ. ಈ ಹಿಂದೆ ರಾಜ್ಯಗಳಲ್ಲಿ ಮನೆಬಳಕೆ ಎಲ್‌ಪಿಜಿ ಮೇಲೆ ಶೇ. 2ರಿಂದ 3 ವ್ಯಾಟ್ ವಿಧಿಸಲಾಗಿತ್ತು. ಜಾಗತಿಕ ತೈಲ ಬೆಲೆಯಲ್ಲಿ ಇಳಿಕೆಯಾದರೂ ಅದರಿಂದ ಜನರಿಗೆ ಯಾವುದೇ ಲಾಭವಾಗುತ್ತಿಲ್ಲ ಎಂದು ಮಾಕೇನ್ ಹೇಳಿದರು.