ಮಹಿಳೆಯ ಸರ ಅಪಹರಣ: ಮೂವರ ಬಂಧನ
ಕಾರ್ಕಳ ಜು.4: ಮುಲ್ಲಡ್ಕ ಬಳಿ ಜೂ. 30ರಂದು ಮಹಿಳೆಯೊಬ್ಬರ ಸರ ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ರ್ಕಾಕಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಕಟೀಲು ಕೊಂಡೆಮೂಲ ಗ್ರಾಮದ ಶ್ರೀನಿಧಿ ಯಾನೆ ಶೀನು (21), ಎಕ್ಕಾರು ಗ್ರಾಮದ ದೇವರಗುಡ್ಡೆಯ ನಿತಿನ್ ಪೂಜಾರಿ(20), ಕಿನ್ನಿ ಕಂಬ ರಾಯಕೋಡಿಯ ಪುರುಷೋತ್ತಮ ಪೂಜಾರಿ ಯಾನೆ ರವಿ(27) ಎಂದು ಗುರುತಿಸಲಾಗಿದೆ.
ಮುಲ್ಲಡ್ಕದ ಕಮಲಮ್ಮ(70) ಅವರು ಅಂಗಡಿಗೆ ಹೋಗಿ ವಾಪಾಸು ರಸ್ತೆಯಲ್ಲಿ ಬರುವಾಗ ಇಬ್ಬರು ಅಪರಿಚಿತರು ಬೈಕಿನಲ್ಲಿ ಬಂದು ಕಮಲಮ್ಮರ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಜು.3ರಂದು ಕಿನ್ನಿಗೋಳಿ ಬಳಿ ಬಂಧಿಸಿದರು. ಇವರಿಂದ ಒಂದೂವರೆ ಪವನ್ ಚಿನ್ನದ ಚೈನ್, 2 ಚಿನ್ನ ಲೇಪಿತವಾಗಿರುವ ರೋಲ್ಡ್ ಗೋಲ್ಡ್ ಚೈನ್ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಹೋಂಡಾ ಹಾರ್ನೆಟ್ ಬೈಕ್‌ನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 1,33,000ರೂ. ಎಂದು ಅಂದಾಜಿಸಲಾಗಿದೆ. ಆರೋಪಿಗಳನ್ನು ಕಾರ್ಕಳ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಕಾರ್ಕಳ ವೃತ್ತ ನಿರೀಕ್ಷಕ ಜಾಯ್ ಅಂತೋನಿ ನೇತೃತ್ವದಲ್ಲಿ ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ಪುರುಷೋತ್ತಮ, ಸಿಬ್ಬಂದಿಗಳಾದ ರಾಜೇಶ್, ಪ್ರಶಾಂತ್, ರಾಘವೇಂದ್ರ. ಗುರುರಾಜ್, ರಾಮ, ಗಿರೀಶ್, ಘನಶ್ಯಾಮ, ಜಗದೀಶ ಹಾಗೂ ಆರ್‌ಡಿಸಿ ಘಟಕದ ದಿನೇಶ್ ಮತ್ತು ಶಿವಾನಂದ ಈ ಕಾರ್ಯಾಚರಣೆ ನಡೆಸಿದ್ದಾರೆ.