ಮುಂದಿನ ದಿನಗಳಲ್ಲಿ ನಿರಾತಂಕವಾಗಿ ಕಂಬಳ: ಶಾಂತಾರಾಮ ಶೆಟ್ಟಿ ಬಾರ್ಕೂರು

Update: 2017-07-04 16:45 GMT

ಮಂಗಳೂರು, ಜು.4: ಕಂಬಳ ಕುರಿತ ಸುಗ್ರೀವಾಜ್ಞೆಗೆ 6 ತಿಂಗಳ ಅವಧಿಯಿದ್ದು, ನವೆಂಬರ್‌ನಲ್ಲಿ ನಡೆಯುವ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಾಣಿ ಹಿಂಸಾಚಾರ ತಡೆ ವಿಧೇಯಕವನ್ನು ತಿದ್ದುಪಡಿ ಮಾಡಿ ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಶಾಂತಾರಾಮ ಶೆಟ್ಟಿ ಬಾರ್ಕೂರು ಹೇಳಿದ್ದಾರೆ.

ಕರಾವಳಿ ಭಾಗದ ಜನಪದ ಕ್ರೀಡೆ ಕಂಬಳ ಸುಗ್ರೀವಾಜ್ಞೆ ಹೊರಡಿಸಲು ರಾಷ್ಟ್ರಪತಿಗಳು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಗ್ರೀವಾಜ್ಞೆಗೆ 6 ತಿಂಗಳ ಅವಧಿ ಇರುವುದರಿಂದ ಮುಂದಿನ ನವೆಂಬರ್‌ನಿಂದ ಮಾರ್ಚ್ ವರೆಗೆ ಕಂಬಳ ನಿರಾತಂಕವಾಗಿ ನಡೆಯಲಿದೆ ಎಂದರು.

2014ರಲ್ಲಿ ಕಂಬಳಕ್ಕೆ ಪೆಟಾ ಸ್ವಯಂಸೇವಾ ಸಂಸ್ಥೆ ಹೈಕೋರ್ಟ್‌ನಲ್ಲಿ ತಡೆ ತಂದ ಬಳಿಕ ಒಂದು ಬಾರಿ ಮಾತ್ರ ಕಂಬಳ ನಡೆದಿದೆ. ಕಳೆದ ವರ್ಷ ನಡೆಸಲು ಸಾಧ್ಯವಾಗಿಲ್ಲ. ಇದೀಗ ರಾಷ್ಟ್ರಪತಿಯವರು ಹೊರಡಿಸಿರುವ ಅನುಮತಿಯಿಂದಾಗಿ ಕಂಬಳಕ್ಕೆ ಇದ್ದ ಎಲ್ಲಾ ಅಡ್ಡಿ ಆತಂಕಗಳೂ ನಿವಾರಣೆಯಾಗಿದೆ ಎಂದರು.

ಕಂಬಳ ಸಮಿತಿಯ ಕಾನೂನು ಹೋರಾಟ ವಿಭಾಗದ ಅಶೋಕ್ ಕುಮಾರ್ ರೈ ಮಾತನಾಡಿ, ಹೈಕೋರ್ಟ್‌ಗೆ ಈ ವಿಚಾರದಲ್ಲಿ ಮೆಮೋ ಸಲ್ಲಿಸಲಾಗಿದೆ. ಹೈಕೋರ್ಟ್ ಜು.5ರಂದು ತಡೆಯಾಜ್ಞೆ ತೆರವುಗೊಳಿಸುವ ನಿರೀಕ್ಷೆ ಇದೆ ಎಂದರು.

ಕೃತಜ್ಞತೆ:

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಂಬಳ ಉಳಿಸಲು ಸಾಕಷ್ಟು ಪ್ರಯತ್ನ ಮಾಡಿವೆ. ಕಾನೂನು ತಿದ್ದುಪಡಿ ವಿಧೇಯಕ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಂಸದ ನಳಿನ್ ಕುಮಾರ್ ಕಟೀಲ್, ರಾಜ್ಯ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಸಚಿವರಾದ ಬಿ.ರಮಾನಾಥ ರೈ, ಪ್ರಮೋದ್ ಮಧ್ವರಾಜ್, ಶಾಸಕ ಅಭಯಚಂದ್ರ ಜೈನ್ ಸಹಿತ ಎಲ್ಲಾ ಜನಪ್ರತಿನಿಧಿಗಳು, ಸಂಘ ಸಂಸ್ಥೆ, ಯಕ್ಷಗಾನ ಕಲಾವಿದರು, ಕಲಾವಿದರಿಗೆ ಕಂಬಳ ಸಮಿತಿ ಕೃತಜ್ಞತೆ ಸಲ್ಲಿಸಿದೆ.

ಸಮಿತಿ ಗೌರವಾಧ್ಯಕ್ಷ ಭಾಸ್ಕರ್ ಎಸ್.ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ಕಂಗಿನಮನೆ, ಕೋಶಾಧಿಕಾರಿ ಪಿ.ಆರ್.ಶೆಟ್ಟಿ, ಮಾಜಿ ಅಧ್ಯಕ್ಷ ಡಾ.ಜೀವಂಧರ ಬಲ್ಲಾಳ್, ಸುಕುಮಾರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.

ಪದಾಧಿಕಾರಿಗಳಿಂದ ಸಂಭ್ರಮಾಚರಣೆ:

ಇದೇ ಸಂದರ್ಭದಲ್ಲಿ ಕಂಬಳ ಸುಗ್ರೀವಾಜ್ಞೆಗೆ ಅನುಮತಿ ಸಿಕ್ಕಿದ ಹಿನ್ನೆಲೆಯಲ್ಲಿ ಕಂಬಳ ಸಮಿತಿಯ ಪದಾಧಿಕಾರಿಗಳು ಮಂಗಳವಾರ ಎಂ.ಜಿ.ರಸ್ತೆಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News