ಪ್ಲಾಸ್ಟಿಕ್ ಬಳಕೆ ಕುರಿತು ಜಾಗೃತರಾಗದ ಜನತೆ: ಜಿಪಂ ಸಿಇಒ ವಿಷಾದ

Update: 2017-07-05 12:20 GMT

ಮಂಗಳೂರು, ಜು. 5: ದ.ಕ.ಜಿಲ್ಲೆಯು ಸಾಕ್ಷರತೆಯಲ್ಲಿ ಶೇ.87 ಪ್ರಗತಿ ಸಾಧಿಸಿದ್ದರೂ ಕೂಡ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಕುರಿತು ಇನ್ನೂ ಜಾಗೃತರಾಗಿಲ್ಲ. ಹೆದ್ದಾರಿ ಸಹಿತ ಎಲ್ಲೆಂದರಲ್ಲಿ ಕಸವನ್ನು ಎಸೆದು ಹೋಗುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ಜನರು ಸಾಕ್ಷರರಾಗುವ ಅಗತ್ಯವಿದೆ ಎಂದು ದ.ಕ.ಜಿಪಂ ಸಿಇಒ ಡಾ. ಎಂ.ಆರ್.ರವಿ ಹೇಳಿದರು.

ದ.ಕ. ಜಿಪಂ ಸಭಾಂಗಣದಲ್ಲಿ ಲೋಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿಯ ಸಹಯೋಗದಲ್ಲಿ ಬುಧವಾರ ನಡೆದ ಜಲ ಸಾಕ್ಷರತಾ ಆಂದೋಲನ ಪ್ರೇರಣಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಜಿಲ್ಲೆಯ 230 ಗ್ರಾಪಂ ಪೈಕಿ 227 ಗ್ರಾಪಂಗಳಲ್ಲಿ ಈಗಾಗಲೇ ಸಾಕ್ಷರತಾ ಪ್ರೇರಕರನ್ನು ನೇಮಕ ಮಾಡಲಾಗಿದೆ. ಬಾಕಿಯಿರುವ 3 ಗ್ರಾಪಂಗಳಲ್ಲಿ ಶೀಘ್ರ ಪ್ರೇರಕರ ನೇಮಕ ನಡೆಯಲಿದೆ. ಅವರು ತಮ್ಮ ಸಂಪನ್ಮೂಲ ಹಾಗೂ ಸಾಮರ್ಥ್ಯವನ್ನು ಬಳಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಬೇಕಿದೆ ಎಂದು ಡಾ.ಎಂ.ಆರ್.ರವಿ ನುಡಿದರು.

ದ.ಕ.ಜಿಲ್ಲೆಯನ್ನು ಈಗಾಗಲೇ ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಘೋಷಣೆ ಮಾಡಲಾಗಿದೆ. ಅದನ್ನು ದೃಢೀಕರಿಸಿ ಸ್ಥಿರತೆ ಕಾಯ್ದುಕೊಳ್ಳುವ ಕಾರ್ಯ ನಡೆಯಬೇಕಿದೆ. 2019ರ ಅಕ್ಟೋಬರ್ 2ಕ್ಕೆ ರಾಷ್ಟ್ರವನ್ನೇ ಬಹಿರ್ದೆಸೆ ಮುಕ್ತ ಮಾಡಲು ಸಿದ್ಧತೆ ನಡೆಸಿದೆ ಎಂದು ಡಾ.ಎಂ.ಆರ್. ರವಿ ತಿಳಿಸಿದರು.
ಜನಶಿಕ್ಷಣ ಟ್ರಸ್ಟ್‌ನ ಶೀನ ಶೆಟ್ಟಿ ಮಾತನಾಡಿ, 1990ರ ಅಕ್ಟೋಬರ್ 2ರಂದು ಉಪ್ಪಿನಂಗಡಿಯಲ್ಲಿ ಡಾ. ಶಿವರಾಮ ಕಾರಂತರು ಸಾಕ್ಷರತಾ ಆಂದೋಲಕ್ಕೆ ನಾಂದಿ ಹಾಡಲಾಗಿತ್ತು. ಅದೇ ಕಲ್ಪನೆಯಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಮಂದಿ ನವಸಾಕ್ಷರರು ಬದುಕು ಕಟ್ಟಿದ್ದಾರೆ. ಹೊಸ ಕಲ್ಪನೆಯ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಅತಿ ಅಗತ್ಯವಾಗಿದೆ ಎಂದರು.

ಜಿಪಂ ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು ಕಾರ್ಯಕ್ರಮ ಉದ್ಘಾಟಿಸಿದರು. ಮೊಂಟೆಪದವು ಶಾಲಾ ಮುಖ್ಯಶಿಕ್ಷಕ ಸಂತೋಷ್ ಕುಮಾರ್ ಹಾಗೂ ಸಿಆರ್‌ಪಿ ಹರ್ಷಲತಾ ಪ್ರೇರಕರಿಗೆ ಉಪನ್ಯಾಸ ನೀಡಿದರು. ಇಬ್ಬರು ಸಾಧಕ ಪ್ರೇರಕರಾದ ಪಾತುಂಞಿ ಎದುರುಪದವು ಹಾಗೂ ಯಶೋಧಾ ಲಾಲ ಅನುಭವವನ್ನು ಹಂಚಿಕೊಂಡರು. ವೇದಿಕೆಯಲ್ಲಿ ಜಿಪಂ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು ಉಪಸ್ಥಿತರಿದ್ದರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸುಧಾಕರ್ ಕೆ. ಸ್ವಾಗತಿಸಿದರು. ಭಾಗೀರಥಿ ರೈ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News