ಶಿಕ್ಷಣ ರಂಗದಲ್ಲಿ ಕಾಟುಕುಕ್ಕೆ ಸುಬ್ರಹ್ಮಣ್ಯೇಶ್ವರ ಶಾಲೆಯ ಕೊಡುಗೆ ಅಪಾರ: ಪಿ.ಬಿ.ಅಬ್ದುಲ್ ರಝಾಕ್
ಮಂಜೇಶ್ವರ, ಜು.5: ಭಾರತದ ಭವಿಷ್ಯ ಅದರ ತರಗತಿ ಕೊಠಡಿಗಳಲ್ಲಿ ರೂಪಿಸಲ್ಪಡುತ್ತದೆ. ಗುಣಮಟ್ಟದ ವಿದ್ಯಾಭ್ಯಾಸವನ್ನು ನೀಡುತ್ತಿರುವ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಕಾರ್ಯ ಶ್ಲಾಘನೀಯ. ಶಾಲೆಯ ಅಭಿವೃದ್ಧಿಗೆ ಶಾಸಕನೆಂಬ ನೆಲೆಯಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಅವರು ಹೇಳಿದರು.
ಅವರು ತಮ್ಮ ಶಾಸಕರ ನಿಧಿಯಿಂದ ಕೊಡಮಾಡಿದ ಕಂಪ್ಯೂಟರ್‌ಗಳ ಉದ್ಘಾಟನೆಯನ್ನು ಇತ್ತೀಚೆಗೆ ನೆರವೇರಿಸಿ ಮಾತನಾಡಿದರು. ವಿದ್ಯಾಭ್ಯಾಸ ರಂಗ ಬದಲಾವಣೆಗೊಳ್ಳುತ್ತಿದೆ. ತರಗತಿಗಳು ಆಧುನೀಕರಣಗೊಳಿಸುವುದು ಪ್ರಸ್ತುತ ಕಾಲದ ಅವಶ್ಯಕತೆಯಾಗಿದೆ. ಈ ಗ್ರಾಮದಲ್ಲಿ ಕಲಿತ ವಿದ್ಯಾರ್ಥಿಗಳು ತಿರುವನಂತಪುರದ ಸೆಕ್ರೆಟರಿಯೇಟ್ ವರೆಗೆ ತಲುಪುವಂತೆ ಆಗಬೇಕು ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಕಾಟುಕುಕ್ಕೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸಂಜೀವ ರೈ, ಪ್ರಾಂಶುಪಾಲ ಪದ್ಮನಾಭ ಶೆಟ್ಟಿ, ಮುಖ್ಯೋಪಾಧ್ಯಾಯ ಸುಧೀರ್ ಕುಮಾರ್, ಆಡಳಿತ ಮಂಡಳಿ ಸದಸ್ಯರಾದ ಗೋಪಾಲಕೃಷ್ಣ ಭಟ್, ಸಂದೇಶ್ ರೈ, ಬಿ.ಎಸ್.ಗಾಂಭೀರ್, ಫೌಸಿಯಾ, ಅಧ್ಯಾಪಕರಾದ ಅನಿತಾ ದೇವಿ, ಸುರೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ಶಾಸಕರನ್ನು ಸಮ್ಮಾನಿಸಲಾಯಿತು. ಪ್ರಬಂಧಕ ಮಿತ್ತೂರು ಪುರುಷೋತ್ತಮ ಭಟ್ ಸ್ವಾಗತಿಸಿ, ಅಧ್ಯಾಪಿಕೆ ವಾಣಿ ವಂದಿಸಿದರು. ರಾಜೇಶ್ ಸಿ.ಎಚ್. ಕಾರ್ಯಕ್ರಮ ನಿರೂಪಿಸಿದರು. ಶಾಸಕರು ಮೊದಲು ಎನ್‌ಸಿಸಿ ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು.