ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಡೆಗಟ್ಟುವ ಉಪಕ್ರಮ
ಹೊಸದಿಲ್ಲಿ, ಜು.5: ಭ್ರಷ್ಟಾಚಾರ ತಡೆಗಟ್ಟುವ ಕ್ರಮವಾಗಿ, ಸರಕಾರಿ ನೌಕರರು ನಡೆಸಿರುವ ಶಂಕಾಸ್ಪದ ಬ್ಯಾಂಕಿಂಗ್ ವ್ಯವಹಾರದ ಪರಿಶೀಲನೆ ಕಾರ್ಯವನ್ನು ಕೇಂದ್ರೀಯ ಜಾಗೃತಿ ಆಯೋಗ (ಸಿವಿಸಿ) ಆರಂಭಿಸಿದೆ.
ಸಿವಿಸಿಗೆ ಆರ್ಥಿಕ ಗುಪ್ತಮಾಹಿತಿ ವಿಭಾಗ (ಎಫ್‌ಐಯು)ದಿಂದ ಉಪಯುಕ್ತ ಮಾಹಿತಿ ದೊರೆಯುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಾಗೃತಿ ಆಯುಕ್ತ ಟಿ.ಎಂ.ಭಾಸಿನ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಸರ್ಕಾರಿ ನೌಕರರು ಒಳಗೊಂಡಿರುವ ಸಂಶಯಾಸ್ಪದ ಬ್ಯಾಂಕಿಂಗ್ ವ್ಯವಹಾರಗಳ ಬಗ್ಗೆ ಸಿವಿಸಿಗೆ ನಿಯಮಿತವಾಗಿ ವರದಿ ಲಭ್ಯವಾಗುತ್ತಿದೆ ಎಂದವರು ತಿಳಿಸಿದ್ದಾರೆ
ಅಕ್ರಮ ವ್ಯವಹಾರದಿಂದ ಪಡೆದ ಹಣ ಅಥವಾ ಕಪ್ಪು ಹಣಕ್ಕೆ ಸಂಬಂಧಿಸಿದ ಬ್ಯಾಂಕಿಂಗ್ ವ್ಯವಹಾರದ ಮಾಹಿತಿ ಸಂಗ್ರಹಿಸುವುದು, ಇವುಗಳ ಪರಿಶೀಲನೆ ಮತ್ತು ಈ ಮಾಹಿತಿಯನ್ನು ರವಾನಿಸುವ ಕಾರ್ಯವನ್ನು ಎಫ್‌ಐಯು ನಡೆಸುತ್ತಿದೆ. 10 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ವ್ಯವಹಾರವನ್ನು, ಕಪ್ಪು ಹಣದ ಹಿನ್ನೆಲೆಯುಳ್ಳ ಸಂಶಯಾಸ್ಪದ ವ್ಯವಹಾರ ಎಂದು ಭಾವಿಸಲಾಗುತ್ತದೆ.
ಬ್ಯಾಂಕಿಂಗ್ ವ್ಯವಹಾರದ ಮೂಲಕ ಕಪ್ಪು ಹಣದ ವ್ಯವಹಾರ ತಡೆಗಟ್ಟುವುದು ಈ ಪ್ರಕ್ರಿಯೆಯ ಪ್ರಧಾನ ಉದ್ದೇಶವಾಗಿದೆ . ಶಂಕಾಸ್ಪದ ಬ್ಯಾಂಕಿಂಗ್ ವ್ಯವಹಾರದ ಪರಿಶೀಲನೆಯಿಂದ ಭ್ರಷ್ಟಾಚಾರ ಪ್ರಕ್ರಿಯೆಯಲ್ಲಿ ಖಾಸಗಿ ವ್ಯಕ್ತಿಗಳು ಮತ್ತು ಸರಕಾರಿ ನೌಕರರ ಮಧ್ಯೆ ಇರುವ ಗುಪ್ತ ಒಪ್ಪಂದದ ತನಿಖೆ ನಡೆಸಲು ಸಹಾಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿವಿಸಿ ಮಾತ್ರವಲ್ಲದೆ, ಜಾರಿ ನಿರ್ದೇಶನಾಲಯ(ಇ.ಡಿ), ಸಿಬಿಐ, ಆರ್‌ಬಿಐ, ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ, ರಾಷ್ಟ್ರೀಯ ತನಿಖಾ ಸಂಸ್ಥೆ, ಸೆಂಟ್ರಲ್ ಇಕನಾಮಿಕ್ ಇಂಟೆಲಿಜೆನ್ಸ್ ಬ್ಯೂರೊ ಮತ್ತು ರಾಜ್ಯ ಸರಕಾರಗಳ ಮುಖ್ಯ ಕಾರ್ಯದರ್ಶಿಗಳಿಗೂ ಎಫ್‌ಐಯು ಮಾಹಿತಿ ನೀಡುತ್ತದೆ.
ಸುಪ್ರೀಂಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡ ಕೂಡಾ ಎಫ್‌ಐಯುನಿಂದ ಮಾಹಿತಿ ಪಡೆಯುತ್ತದೆ.