×
Ad

ಯೋಜನೆ ಕೈಬಿಡುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಡಿಸಿಗೆ ಮನವಿ

Update: 2017-07-05 19:55 IST

ಉಡುಪಿ, ಜು.5: ಉಡುಪಿ ನಗರಸಭೆ ವ್ಯಾಪ್ತಿಯ 76 ಬಡಗುಬೆಟ್ಟುವಿನ ಬೈಲೂರು ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಒಳಚರಂಡಿ, ಕೊಳಚೆ ನೀರು ಶುದ್ದೀಕರಣ ಘಟಕವನ್ನು ವಿರೋಧಿಸಿ ನೂರಾರು ಮಂದಿ ಸ್ಥಳೀಯರು ಬುಧವಾರ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಬೈಲೂರು ಸಂಪೂರ್ಣವಾಗಿ ವಸತಿ ಪ್ರದೇಶವಾಗಿದ್ದು, ಕುಡಿಯುವ ನೀರು ಮತ್ತು ಉತ್ತಮ ಪರಿಸರವನ್ನು ಹೊಂದಿದೆ. ಆದರೆ ಇದೀಗ ನಗರಸಭೆಯು ಬಂಡವಾಳ ಶಾಹಿಗಳ ಉದ್ಧಾರಕ್ಕೆ ಈ ಪ್ರದೇಶದ ವಾತಾವರಣವನ್ನು ಹಾಳು ಮಾಡಲು ಹೊರಟಿದೆ. ಒಳಚರಂಡಿ, ಕೊಳಚೆ ನೀರು ಶುದ್ದೀಕರಣ ಘಟಕ ಮತ್ತು ಪಂಪಿಂಗ್ ಸ್ಟೇಷನ್‌ನ್ನು ಬೈಲೂರಿನಲ್ಲಿ ಸ್ಥಾಪಿಸಲು ಪ್ರಯತ್ನ ನಡೆಸುತ್ತಿದೆ. ಇದರಿಂದ ಇಡೀ ಪರಿಸರ ಹಾಗೂ ಕುಡಿಯುವ ನೀರಿನ ಬಾವಿ ಸಂಪೂರ್ಣ ಕಲುಷಿತಗೊಳ್ಳಲಿದೆ ಎಂದು ಗ್ರಾಮಸ್ಥರು ಮನವಿಯಲ್ಲಿ ದೂರಿದರು.

ಇದೀಗ ಈ ಪರಿಸರದಲ್ಲಿ ಸರ್ವೆ ಕಾರ್ಯ ನಡೆಸಲಾಗಿದ್ದು, ಸ್ಥಳೀಯರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಮಾಹಿತಿ ಕೇಳಲು ಹೋದ ನಾಗರಿಕರಿಗೆ ನಗರಸಭೆ ಅಧಿಕಾರಿಗಳು ಉಡಾಫೆಯಿಂದ ಉತ್ತರಿಸುತ್ತಿದ್ದಾರೆಂದು ಆರೋಪಿ ಸಿದ ಅವರು, ಈ ಯೋಜನೆಯನ್ನು ಬೈಲೂರು ಪ್ರದೇಶದಲ್ಲಿ ಸ್ಥಾಪಿಸದೆ ಬೀಡಿನಗುಡ್ಡೆ ರಸ್ತೆಯಿಂದ ನೇರವಾಗಿ ಕಲ್ಸಂಕ- ಮಠದಬೆಟ್ಟು ಪರಿಸರದಲ್ಲಿರುವ ವೆಟ್‌ವೆಲ್‌ಗೆ ಹೋಗುವಂತೆ ಮಾಡಬೇಕು. ಆದುದರಿಂದ ಇದರ ನೀಲನಕಾಶೆ ಯನ್ನು ತಕ್ಷಣ ಬದಲಾಯಿಸಬೇಕು ಎಂದು ಒತ್ತಾಯಿಸಿದರು.

ಮನವಿಯನ್ನು ಅಪರ ಜಿಲ್ಲಾಧಿಕಾರಿ ಅನುರಾಧ ಸ್ವೀಕರಿಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ, ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ಬೈಲೂರು ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಬಿ.ಮೋಹನ್ ಸುವರ್ಣ, ಶ್ರೀಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇ ಸರ ರಮೇಶ್ ಶೆಟ್ಟಿ, ಯಶವಂತ್, ರತ್ನಾಕರ ಜಿ.ಎಸ್., ವಿನೋದ್ ಜತ್ತನ್ನ, ರವೀಂದ್ರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News