×
Ad

ಸರಕಾರ, ಸಮಾಜ, ಸನ್ಯಾಸಿಗಳಿಂದ ಶಾಲೆಗಳ ಪ್ರಗತಿ: ಪೇಜಾವರ ಶ್ರೀ

Update: 2017-07-05 19:58 IST

ಉಡುಪಿ, ಜು.5: ಸರಕಾರ, ಸಮಾಜ, ಸನ್ಯಾಸಿಗಳು ಒಂದಾದರೆ ಶಿಕ್ಷಣ ಸಂಸ್ಥೆಗಳ ಬೆಳವಣಿಗೆ ಸಾಧ್ಯವಾಗುತ್ತದೆ. ಕನ್ನಡ ಶಾಲೆಗಳಿಗೆ ವಿಶೇಷ ಪ್ರೋತ್ಸಾಹ ನೀಡುವ ಮೂಲಕ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವಂತಾಗಬೇಕು ಎಂದು ಪರ್ಯಾಯ ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಪರ್ಯಾಯ ಪೇಜಾವರ ಮಠ ಶ್ರೀಕೃಷ್ಣ ಮಠದ ವತಿಯಿಂದ ಬುಧವಾರ ರಾಜಾಂಗಣದಲ್ಲಿ ಜಿಲ್ಲೆಯ ಚಿಣ್ಣರ ಸಂತರ್ಪಣೆ ಶಾಲೆಗಳ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಿಸಿ ಅವರು ಆಶೀರ್ವಚನ ನೀಡಿದರು.
ಚಿಣ್ಣರ ಸೇವೆಯೇ ಕೃಷ್ಣನ ಸೇವೆ. ಪ್ರತಿ ಪರ್ಯಾಯದಲ್ಲಿ ಒಂದೊಂದು ಹೊಸ ಹೆಜ್ಜೆಗಳನ್ನು ಇಡುತ್ತ ಹೋದರೆ ಚಿಣ್ಣರ ಶಾಲೆಗಳ ಪ್ರಗತಿ ಸಾಧ್ಯವಾಗುತ್ತದೆ. ನಮ್ಮ ಪರ್ಯಾಯದಲ್ಲಿ ಗೌರವ ಶಿಕ್ಷಕರ ವೇತನ ಹೆಚ್ಚಿಸುವುದು ಸೇರಿದಂತೆ ಇತರ ವಿಚಾರಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಸದ್ಯವೇ ಸಮಾಲೋಚನೆ ನಡೆಸಲಾಗುವುದು ಎಂದರು.

ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಕೋಟ್ಯಂತರ ರೂ. ಹಣ ವ್ಯಯಿಸುವಂತೆ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ತಮ್ಮ ಊರಿನ ಶಾಲೆಗಳ ಪ್ರಗತಿಗೂ ಶ್ರಮಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ 88 ಚಿಣ್ಣರ ಶಾಲೆಗಳ 12ಸಾವಿರ ಮಕ್ಕಳಿಗೆ ಸಮವಸ್ತ್ರಗಳನ್ನು ವಿತರಿಸಲಾಯಿತು. ಚಿಣ್ಣರ ಸಂತರ್ಪಣೆ ಶಾಲೆಗಳ ಒಕ್ಕೂಟದ ಅಧ್ಯಕ್ಷ ಅಶೋಕ್ ಕುಮಾರ್ ಮಾಡ, ಜಿಲ್ಲಾ ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ನಾಗೇಶ್ ಶ್ಯಾನುಭಾಗ್ ಉಪಸ್ಥಿತರಿದ್ದರು. ಡಾ.ಗುರುಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

ಹಿಂಸಾರಹಿತ ಕಂಬಳ ನಡೆಯಲಿ: ಕಂಬಳ ಕ್ರೀಡೆಯು ಕರಾವಳಿಯ ದೊಡ್ಡ ಹಬ್ಬ. ಇಲ್ಲಿನ ವಿಶಿಷ್ಟ ಸಂಸ್ಕೃತಿಯನ್ನು ಉಳಿಸುವ ಕೆಲಸ ಆಗಿದೆ. ಕಂಬಳ ಹಿಂಸಾರಹಿತವಾಗಿ ಆಗಬೇಕೆಂಬುದನ್ನು ಈಗಾಗಲೇ ಎಲ್ಲರೂ ಒಪ್ಪಿದ್ದಾರೆ. ಕಂಬಳದ ಮೂಲಕ ಗೋಸಂತತಿ ಬೆಳವಣಿಗೆ, ಉತ್ಸವಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕೆ ಹೊರತು ಸ್ಪರ್ಧೆಗೆ ಅಲ್ಲ. ಹಿಂಸಾ ರಹಿತವಾಗಿ ನಡೆಯುವ ಮೂಲಕ ಕಣ್ಣಿಗೆ ರಂಜನೆ ಆಗಬೇಕು ಮತ್ತು ಮನಸ್ಸಿಗೆ ವೇದನೆ ಆಗಬಾರದು ಎಂದು ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News