ಭಾರತಕ್ಕೆ ಭೇಟಿ ನೀಡುವ ಚೀನೀಯರಿಗೆ ಪ್ರವಾಸ ಎಚ್ಚರಿಕೆ ನೀಡುವ ಸಾಧ್ಯತೆ : ಚೀನಾ
ಬೀಜಿಂಗ, ಜು.5: ಸಿಕ್ಕಿಂ ವಿಭಾಗದಲ್ಲಿ ತಲೆದೋರಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಭಾರತಕ್ಕೆ ಭೇಟಿ ನೀಡುವ ಚೀನಾದ ಪ್ರಜೆಗಳಿಗೆ ‘ಪ್ರವಾಸ ಎಚ್ಚರಿಕೆ’ ನೀಡುವ ಆಯ್ಕೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಚೀನಾ ತಿಳಿಸಿದೆ.
ಆಯಾ ರಾಷ್ಟ್ರಗಳ ಭದ್ರತಾ ಸ್ಥಿತಿಗೆ ಅನುಗುಣವಾಗಿ , ವಿದೇಶದಲ್ಲಿರುವ ತನ್ನ ಪ್ರಜೆಗಳ ರಕ್ಷಣೆ ಹಾಗೂ ಕಾನೂನುಬದ್ಧ ಹಕ್ಕು ಮತ್ತು ಹಿತಾಸಕ್ತಿಯ ಬಗ್ಗೆ ಚೀನಾ ಸರಕಾರ ಮಹತ್ವ ನೀಡುತ್ತಿದೆ. ಆದ್ದರಿಂದ ಭಾರತಕ್ಕೆ ಭೇಟಿ ನೀಡಲು ಬಯಸುವ ಚೀನಾ ಪ್ರಜೆಗಳಿಗೆ ಪ್ರವಾಸ ಎಚ್ಚರಿಕೆ ನೀಡಬೇಕೇ ಎಂಬ ಬಗ್ಗೆ ನಾವು ಶೀಘ್ರ ನಿರ್ಧರಿಸಲಿದ್ದೇವೆ ಎಂದು ಚೀನಾದ ವಿದೇಶ ವ್ಯವಹಾರ ಸಚಿವಾಲಯದ ವಕ್ತಾರ ಜೆಂಗ್ ಶುವಾಂಗ್ ಸುದ್ದಿಗಾರರಿಗೆ ತಿಳಿಸಿದರು.
ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚೀನಾದ ಸಂಸ್ಥೆಗಳು ಚೀನಾ ವಿರೋಧಿ ಭಾವನೆಯ ಕಾರಣ ಸಮಸ್ಯೆಗೆ ಸಿಲುಕದಂತೆ ಎಚ್ಚರಿಕೆಯಿಂದ ಇರಬೇಕು ಎಂದು ಬೀಜಿಂಗ್‌ನ ಸರಕಾರಿ ಸ್ವಾಮ್ಯದ ದಿನಪತ್ರಿಕೆಯೊಂದರಲ್ಲಿ ಮಂಗಳವಾರ ಪ್ರಕಟವಾದ ಸುದ್ದಿಯ ಬಗ್ಗೆ ಅವರು ಪ್ರತಿಕ್ರಿಯೆ ನೀಡುತ್ತಿದ್ದರು.