×
Ad

ಸರಕಾರಿ ಬಸ್ ಸೇವೆಯನ್ನು ಮುಂದುವರಿಸಲು ಮನವಿ

Update: 2017-07-05 21:16 IST

ಉಡುಪಿ, ಜು.5: ಸಾರ್ವಜನಿಕರ ಹಲವು ವರ್ಷಗಳ ಸತತ ಒತ್ತಾಯ ಹಾಗೂ ಹೋರಾಟದ ಫಲವಾಗಿ ಉಡುಪಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಉಡುಪಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಪರವಾನಿಗೆ ಪಡೆದು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುತಿದ್ದ ಸರಕಾರಿ ಬಸ್‌ಗಳ ಸಂಚಾರಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿ ಪರವಾನಿಗೆ ರದ್ದು ಪಡಿಸಿರುವುದು ಅತ್ಯಂತ ಬೇಸರದ ಸಂಗತಿ ಎಂದು ಜಯಕರ್ನಾಟಕ ಸಂಘಟನೆಯ ಉಡುಪಿ ಜಿಲ್ಲಾ ಘಟಕ ಹೇಳಿದೆ.

ಈ ಬಸ್‌ಗಳು ಅತ್ಯಂತ ಹಿಂದುಳಿದ ಹಾಗೂ ನಕ್ಸಲ್ ಪೀಡಿತ ಗ್ರಾಮೀಣ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಈ ಭಾಗದ ವಿದ್ಯಾರ್ಥಿಗಳು ರಿಯಾಯಿತಿ ಪಾಸ್ ಪಡೆದು ಪ್ರಯಾಣಿಸುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಉಚಿತ ಪಾಸ್ ಪಡೆದು, ಎಂಡೋಸಲ್ಫಾನ್ ಪೀಡಿತರು ಹಾಗೂ ಹಿರಿಯ ನಾಗರಿಕರು ಸಹ ಇದರ ಉಪಯೋಗ ಪಡೆದು ಕೊಳ್ಳುತ್ತಿದ್ದರು.

ಖಾಸಗಿ ಬಸ್‌ಗಳಿಂದ ತೊಂದರೆಯಾಗಿಲ್ಲ:  ನರ್ಮ್ ಬಸ್‌ಗಳ ಓಡಾಟಕ್ಕೆ ಖಾಸಗಿ ಬಸ್‌ಗಳಿಂದ ಯಾವತ್ತೂ ತೊಂದರೆಯಾಗಿಲ್ಲ. ಈ ನಿಟ್ಟಿನಲ್ಲಿ ಖಾಸಗಿ ಬಸ್ ಮಾಲಕರು ನರ್ಮ್ ಬಸ್ಸಿಗೆ ತಡೆಯಾಜ್ಞೆ ತಂದಿರುವುದು ಖಂಡನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿರುವುದು ದುರಾದೃಷ್ಟಕರ ಎಂದು ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಮ್ಮ ಸಂಘದ ಸದಸ್ಯರನ್ನೊಳಗೊಂಡ ನಿಯೋಗ ಹಲವು ಬಾರಿ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿತ್ತು. ಸರಿಯಾದ ಬಸ್ ವ್ಯವಸ್ಥೆ ಇಲ್ಲದ ಊರಿಗೆ ನರ್ಮ್ ಬಸ್ ಹಾಕಿ. ಇದರಿಂದ ಪ್ರಯಾಣಿಕರಿಗೂ ಅನುಕೂಲ. ಖಾಸಗಿ ಉದ್ಯಮವೂ ಉಳಿಯುತ್ತದೆ ಎಂದವರು ಹೇಳಿದ್ದಾರೆ.
ಆದರೆ ಬಸ್ ಇಲ್ಲದ ಊರುಗಳಿಗೆ ಒಂದೆರಡು ಬಸ್ ಹಾಕಿ ಉಳಿದೆಲ್ಲಾ ಬಸ್‌ಗಳನ್ನು ಹೆಚ್ಚು ಬಸ್ ಇರುವ ಊರುಗಳಿಗೆ ಹಾಕಿದ ಹಿಂದಿನ ಉದ್ದೇಶ ಏನು ಎಂದು ಪ್ರಶ್ನಿಸಿದ ಅವರು ಈ ಮಾರ್ಗಗಳಲ್ಲಿ ನರ್ಮ್ ಬಸ್‌ಗಳ ಅಗತ್ಯವಿದೆಯೇ ಎಂದು ಕೇಳಿದ್ದಾರೆ.

ಜಿಲ್ಲೆಯ ಸಮಗ್ರ ಸಾರಿಗೆ ವ್ಯವಸ್ಥೆಗೆ ಒಂದು ನೀತಿ ರೂಪಿಸಿ, ಅಲ್ಲದಿದ್ದರೆ ಎರಡು ವರ್ಷದೊಳಗೆ ಖಾಸಗಿ ವ್ಯವಸ್ಥೆ ಮುಚ್ಚುವುದು ಖಂಡಿತ. ನ್ಯಾಯಾಲಯ ಬಿಟ್ಟು ಉಸ್ತುವಾರಿ ಸಚಿವರೇ ನಮ್ಮನ್ನು ಕರೆದರೆ ಮಾತುಕತೆಗೆ ಸಿದ್ಧ ಎಂದು ಬಲ್ಲಾಳ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News