ಕಲ್ಲಡ್ಕದ “ಹಂತಕ”ರಿಗೆ ಸೌಹಾರ್ದದ ಪಾಠ ಕಲಿಸಿದ ಅಬ್ದುರ್ರವೂಫ್
ಬಂಟ್ವಾಳ, ಜು.5: ರಕ್ತದ ಮಡುವಿನಲ್ಲಿ ಬಿದ್ದಿರುವ ನೆರೆಯವನ ಜೀವ ಉಳಿಸುವಾಗ ಜಾತಿ, ಧರ್ಮದ ಪ್ರಶ್ನೆ ಬರುವುದಿಲ್ಲ. ಸಂಘಟನೆ, ಜಾತಿ, ಧರ್ಮ ಯಾವುದಾದರೇನು ಒಬ್ಬನ ಜೀವ ಉಳಿಸುವುದಕ್ಕಿಂತ ದೊಡ್ಡ ಧರ್ಮ ಇನ್ನೊಂದಿಲ್ಲ. ಹೀಗೆ ಹೇಳಿದವರು ಬಿ.ಸಿ.ರೋಡಿನಲ್ಲಿ ಮಂಗಳವಾರ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾದ ಉದಯ ಲಾಂಡ್ರಿ ಮಾಲಕ, ಆರೆಸ್ಸೆಸ್ ಕಾರ್ಯಕರ್ತ ಶರತ್‌ನನ್ನು ಆಸ್ಪತ್ರೆಗೆ ಸಾಗಿಸಿದ ಬಿ.ಸಿ.ರೋಡ್ ಕೈಕಂಬದ ಶಾಂತಿಅಂಗಡಿ ಸಮೀಪದ ತಾಳಿಪಡ್ಪು ನಿವಾಸಿ ಟಿ.ಉಮರಬ್ಬ ಎಂಬವರ ಪುತ್ರ ಹಣ್ಣು ಹಂಪಲು ವ್ಯಾಪಾರಿ ಅಬ್ದುರ್ರವೂಫ್.
10 ಗಂಟೆಯ ಸುಮಾರಿಗೆ ನಾನು ನನ್ನ ಅಂಗಡಿಯಲ್ಲಿ ಇಶಾ (ರಾತ್ರಿಯ) ನಮಾಝ್ ಮಾಡಿ ಪ್ರಾರ್ಥನೆಗಾಗಿ ಕುಳಿತಿದ್ದೆ. ನನ್ನ ಅಂಗಡಿ ಸಮೀಪದ ಬೇಕರಿಯ ಮಾಲಕ ಪ್ರವೀಣ್ ಎಂಬವರು ಆತಂಕದ ಧ್ವನಿಯಿಂದ ಸಾಹೇಬರೇ ಇಲ್ಲಿ ಬನ್ನಿ, ಇಲ್ಲಿ ಬನ್ನಿ ಎಂದು ಕರೆದರು. ಪ್ರವೀಣ್ ಮುಖದಲ್ಲಿ ಭಯ ತುಂಬಿತ್ತು. ನಾನೂ ತಕ್ಷಣ ಹೊರ ಬಂದೆ. ಪ್ರವೀಣ್ ವಿಷಯ ತಿಳಿಸಿದರು. ಕೂಡಲೇ ನಾನು ಲಾಂಡ್ರಿ ಅಂಗಡಿಯ ಒಳಗೆ ಹೋದೆ. ಶರತ್ ಬಟ್ಟೆಗಳ ನಡುವೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ನಾನು ಹೋಗುತ್ತಿದ್ದ ವೇಳೆ ಸುತ್ತಮುತ್ತಲಿನ ಅಂಗಡಿಗಳ ಮಾಲಕರು, ಕೆಲಸದವರು, ಸಾರ್ವಜನಿಕರು ಬಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಶರತ್‌ನನ್ನು ನೋಡಿ ದೂರ ಹೋಗಿ ನಿಂತಿದ್ದರು. ಯಾರೊಬ್ಬರೂ ಶರತ್‌ರನ್ನು ಆಸ್ಪತ್ರೆಗೆ ಸಾಗಿಸಲು ಮುಂದೆ ಬರಲಿಲ್ಲ. ಹೆಚ್ಚಿನವರು ಹತ್ತಿರವೂ ಸುಳಿಯಲಿಲ್ಲ.
ಶರತ್‌ನನ್ನು ಒಂದೆರಡು ಬಾರಿ ಎತ್ತಲು ಪ್ರಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ. ನಾನು ಪ್ರವೀಣ್ ಎಂಬವರನ್ನು ಹತ್ತಿರ ಕರೆದೆ. ಪ್ರವೀಣ್‌ರ ಸಹಾಯದೊಂದಿಗೆ ಅಂಗಡಿಗೆ ಹಣ್ಣು ಹಂಪಲು ತರುವ ನನ್ನ ರಿಕ್ಷಾದಲ್ಲಿ ಶರತ್‌ರನ್ನು ಹಾಕಿ ತುಂಬೆ ಆಸ್ಪತ್ರೆಗೆ ಸಾಗಿಸಿದೆವು. ಈ ವೇಳೆ ಇಬ್ಬರು ರಿಕ್ಷಾಕ್ಕೆ ಹತ್ತಿದ್ದರು. ತುಂಬೆ ಆಸ್ಪತ್ರೆಯಲ್ಲಿ ಶರತ್‌ಗೆ ಚಿಕಿತ್ಸೆ ನೀಡಿದ ವೈದ್ಯರು ತಕ್ಷಣ ಮಂಗಳೂರು ಆಸ್ಪತ್ರೆಗೆ ಸಾಗಿಸಲು ಸೂಚಿಸಿದರು. ಈ ಸಂದರ್ಭ ಆಸ್ಪತ್ರೆಯ ಒಳಗೆ ಹಾಗೂ ಹೊರಗೆ ನೂರಾರು ಮಂದಿ ಹಿಂದೂ ಯುವಕರು ಜಮಾಯಿಸಿದ್ದರು. ಆದರೆ ಆ್ಯಂಬುಲೆನ್ಸ್‌ನಲ್ಲಿ ಶರತ್‌ನನ್ನು ಮಂಗಳೂರಿಗೆ ಸಾಗಿಸಲು ಒಬ್ಬನೇ ಒಬ್ಬ ಮುಂದೆ ಬಂದಿಲ್ಲ. ಶರತ್ ಇದ್ದ ಸ್ಟ್ರೆಚರ್‌ನನ್ನು ಆ್ಯಂಬುಲೆನ್ಸ್‌ನ ಒಳಗೆ ದೂಡಲು ಯಾರ ಸಹಾಯವೂ ಸಿಕ್ಕಿಲ್ಲ. ಎಲ್ಲರೂ ದೂರದಲ್ಲಿ ನಿಂತು ನೋಡುತ್ತಿದ್ದರಷ್ಟೇ. ಕೊನೆಗೆ ನಾನು, ಬಿ.ಸಿ.ರೋಡಿನಿಂದ ನಮ್ಮ ರಿಕ್ಷಾದಲ್ಲಿ ಬಂದಿದ್ದ ಮತ್ತೊಬ್ಬ ಸೇರಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಆ್ಯಂಬುಲೆನ್ಸ್‌ನಲ್ಲಿ ಶರತ್‌ನನ್ನು ಸಾಗಿಸಿದೆವು.
ರಾತ್ರಿ 2 ಗಂಟೆಯವರೆಗೆ ಆಸ್ಪತ್ರೆಯಲ್ಲೇ ಇದ್ದು ಚಿಕಿತ್ಸೆಗೆ ಬೇಕಾದ ಎಲ್ಲ ಸಹಕಾರ ನೀಡಿದೆ. ಬಳಿಕ ಗೆಳೆಯನ ಕಾರಿನಲ್ಲಿ ಮನೆಗೆ ಬಂದೆ. ನಾನು ನನ್ನ ಅಂಗಡಿ ಬಂದ್ ಮಾಡದೆ ಹೋಗಿದ್ದೆ. ಜೀವ ಉಳಿಸುವುದೇ ನನ್ನ ಪ್ರಥಮ ಆದ್ಯತೆ ಆಗಿತ್ತು. ಗೆಳೆಯರನ್ನು ಫೋನ್ ಮೂಲಕ ಸಂಪರ್ಕಿಸಿದಾಗ ಅಂಗಡಿಯನ್ನು ನಾವು ಬಂದ್ ಮಾಡಿದ್ದೇವೆ ಎಂದರು. ಶರತ್‌ನ ತಂದೆ ತನಿಯಪ್ಪರವರು ಅಂಗಡಿ ನಡೆಸುತ್ತಿದ್ದರು. 14 ವರ್ಷದಿಂದ ಅವರ ಪರಿಚಯ ಇದೆ. ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರ ಪುತ್ರ ಶರತ್ ಅಂಗಡಿ ನಡೆಸುತ್ತಿದ್ದರು.
ನೆರೆಯವನು ಜೀವಕ್ಕಾಗಿ ನರಳುತ್ತಿರುವಾಗ ಸಂಘಟನೆ, ಜಾತಿ, ಧರ್ಮದ ಪರದೆ ಇರಬಾರದು. - ಅಬ್ದುರ್ರವೂಫ್