ಕರ್ನಾಟಕ ಕ್ರಿಶ್ಚಿಯನ್ ಎಜುಕೇಶನ್ ಸೊಸೈಟಿಯಿಂದ ಕಾಸೆಸ್ ಡೇ
ಮಂಗಳೂರು, ಜು.6: ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಕರಾವಳಿ ಭಾಗದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಕಾರ್ಯವನ್ನು ಕರ್ನಾಟಕ ಕ್ರಿಶ್ಚಿಯನ್ ಎಜುಕೇಶನ್ ಸೊಸೈಟಿ ಸಂಸ್ಥೆ ಮಾಡುತ್ತಿದ್ದು, ಇಲ್ಲಿ ಸಿಗುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಬಳಕೆ ಮಾಡಿಕೊಳ್ಳಬೇಕು ಎಂದು ಮನಪಾ ಆಯುಕ್ತ ಮಹಮ್ಮದ್ ನಝೀರ್ ಹೇಳಿದರು.
ಕರ್ನಾಟಕ ಕ್ರಿಶ್ಚಿಯನ್ ಎಜುಕೇಶನ್ ಸೊಸೈಟಿ ವತಿಯಿಂದ ಕಾಸೆಸ್ ಸಂಸ್ಥಾಪಕ ದಿ. ರೆವರೆಂಡ್ ಡಾ. ಸಿ.ಡಿ. ಜತ್ತನ್ ಅವರ ಜನ್ಮದಿನದ ಅಂಗವಾಗಿ ಗುರುವಾರ ನಗರದ ಬಿಷಪ್ ಜತ್ತನ್ ಸಭಾಂಗಣದಲ್ಲಿ ನಡೆದ ಕಾಸೆಸ್ ಡೇ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆ ಒಂದು ವರ್ಗಕ್ಕೆ ಮಾತ್ರ ಸಿಮೀತವಾಗದೇ ಎಲ್ಲ ವರ್ಗದ ಮಕ್ಕಳಿಗೂ ಶಿಕ್ಷಣ ನೀಡುವ ಕಾರ್ಯ ಮಾಡುತ್ತಿದೆ. ಹಾಗಾಗಿ ವಿಶಿಷ್ಟ ರೀತಿಯಲ್ಲಿ ಗುರುತಿಸಿಕೊಳ್ಳುತ್ತಿದೆ ಎಂದು ಮುಹಮ್ಮದ್ ನಝೀರ್ ಹೇಳಿದರು.
ಪ್ರಾಚಾರ್ಯ ಡಾ. ಹನ್ನಿಬಾಲ್ ಕಾರ್ಬಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೆವರೆಂಡ್ ಮೋಹನ್ ಮನೋರಾಜ್, ಉಡುಪಿ ಲೊಂಬೊರ್ಡ್ ಮೆಮೋರಿಯಲ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಸುಶೀಲ್ ಜತ್ತನ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಂಫಿಲ್ ಹಾಗೂ ಪಿಎಚ್‌ಡಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಸಾಗರ್ ಸುಂದರ್ ರಾಜ್ ಸ್ವಾಗತಿಸಿದರು.