×
Ad

ಕಾಂಗ್ರೆಸ್‌ನವರು ಇಫ್ತಾರ್ ಮಾಡಿದಾಗ ಸಂಘ ಪರಿವಾರ ವಿರೋಧಿಸುವುದೇಕೆ: ಶಿವನಾಥ ರೈ ಪ್ರಶ್ನೆ

Update: 2017-07-06 18:31 IST

ಪುತ್ತೂರು, ಜು.6: ಪೇಜಾವರ ಶ್ರೀಗಳು ಸೌಹಾರ್ದತೆಯ ದೃಷ್ಠಿಯಿಂದ ಮಾಡಿರುವ ಇಫ್ತಾರ್ ಕೂಟ ಕಾರ್ಯಕ್ರಮವನ್ನು ನಾವು ಬೆಂಬಲಿಸುತ್ತೇವೆ. ಆದರೆ ಈ ಹಿಂದೆ ಕಾಂಗ್ರೆಸ್‌ನವರಾದ ನಾವು ಪುತ್ತೂರು ತಾಲೂಕಿನ ಸರ್ವೆ ದೇವಾಲಯಲ್ಲಿ ಸೌಹಾರ್ಧತೆಗಾಗಿ ಇಫ್ತಾರ್ ಕೂಟ ನಡೆಸಿದ್ದ ಸಂದರ್ಭದಲ್ಲಿ ಅದನ್ನು ವಿರೋಧಿಸಿ ಅಲ್ಪಸಂಖ್ಯಾತರ ತುಷ್ಠೀಕರಣಕ್ಕಾಗಿ ಈ ರೀತಿ ಮಾಡಲಾಗಿದೆ ಎಂದು ದೊಡ್ಡ ಮಟ್ಟದ ಗೊಂದಲ ಎಬ್ಬಿಸಿರುವ ಹಿಂದೂ ಜಾಗರಣಾ ವೇದಿಕೆ ಮತ್ತು ಬಜರಂಗದಳದವರು ಇದೀಗ ಉಡುಪಿ ಮಠದಲ್ಲಿ ಪೇಜಾವರ ಶ್ರೀಗಳು ನಡೆಸಿರುವ ಇಫ್ತಾರ್ ಕೂಟವನ್ನು ಸಮರ್ಥಿಸಿಕೊಂಡಿದ್ದಾರೆ.

ನಾವು ಇಫ್ತಾರ್ ಕೂಟ ನಡೆಸಿದ್ದ ವೇಳೆ ಆಕ್ಷೇಪವೆತ್ತಿದ್ದ ಈ ಸಂಘಟನೆಯ ನಾಯಕರು ಉಡುಪಿ ಮಠದಲ್ಲಿ ಮಾಡಿರುವ ಇಫ್ತಾರ್ ಕೂಟವನ್ನು ಸಮರ್ಥಿಸುತ್ತಾ ದ್ವಂಧ್ವ ಹೇಳಿಕೆ ನೀಡುತ್ತಾರೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಮಾಜಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು ಆರೋಪಿಸಿದ್ದಾರೆ.

ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾಂಗ್ರೆಸಿಗರಾದ ನಾವು ಇಫ್ತಾರ್ ಕೂಟ ನಡೆಸಿದಾಗ ಹಿಂದೂ ಜಾಗರಣಾ ವೇದಿಕೆಯವರು ರದ್ಧಾಂತ ಮಾಡಿದ್ದರು. ದೇವಾಲಯದಲ್ಲಿ ಇಫ್ತಾರ್ ಕೂಟ ನಡೆಸಿ ಮಾಂಸವನ್ನು ಕೊಡುತ್ತಾರೆ ಎಂದು ಅಪಪ್ರಚಾರ ಮಾಡಿದ್ದರು. ಕಾಂಗ್ರೆಸ್‌ನವರು ಇಫ್ತಾರ್ ಕೂಟ ನಡೆಸಿದರೆ ಸೌಹಾರ್ದತೆ ಅಲ್ಲ, ಬಿಜೆಪಿಯವರು ಮಾಡಿದರೆ ಮಾತ್ರ ಸೌರ್ಹಾದತೆಯೇ ಎಂದು ಪ್ರಶ್ನಿಸಿದರು.

ಪೇಜಾವರ ಶ್ರೀಗಳು ಸೌಹಾರ್ದತೆಯ ದೃಷ್ಠಿಯಿಂದ ಮಾಡಿರುವ ಇಫ್ತಾರ್ ಕೂಟ ಕಾರ್ಯಕ್ರಮವನ್ನು ನಾವು ಬೆಂಬಲಿಸುತ್ತೇವೆ. ಕೆಲ ಸಂಘಟನೆಗಳು ಜಿಲ್ಲೆಯಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದು, ಇದರಿಂದಾಗಿ ಸೌಹಾರ್ದತೆಯ ವಾತಾವರಣ ಹದಗೆಟ್ಟಿದೆ. ಇಂತಹ ಸಂದರ್ಭದಲ್ಲಿ ಇಫ್ತಾರ್ ಕೂಟ ನಡೆಸಿ ಸೌಹಾರ್ದತೆ ಕಾಪಾಡಲು ಮುಂದಾಗಿರುವ ಪೇಜಾವರ ಶ್ರೀಗಳು ಮುಂದೆ ಪ್ರತೀ ಗ್ರಾಮಮಟ್ಟದಲ್ಲಿಯೂ ಸೌಹಾರ್ದ ಸಭೆಗಳನ್ನು ನಡೆಸುವ ಮೂಲಕ ಶಾಂತಿ ಕಾಪಾಡುವ ಪ್ರಯತ್ನ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಹಿಂದೂ ಮತ್ತು ಮುಸ್ಲಿಂ ನಡುವೆ ಗಲಭೆ ಸಂಭವಿಸಿದರೆ ಯಾವ ಕಡೆಯ ನಾಯಕರಿಗೂ ತೊಂದರೆಯಾಗುವುದಿಲ್ಲ. ಎರಡೂ ಕಡೆಯ ಅಮಾಯಕರು ಮಾತ್ರ ಬಲಿಯಾಗುತ್ತಿದ್ದಾರೆ ಎಂದ ಅವರು, ಹಿಂದುತ್ವದ ಹೆಸರಿನಲ್ಲಿ ಬಡ ಹಿಂದೂಗಳ ಜೀವ ಯಾಕೆ ತೆಗೆಯುತ್ತಿದ್ದೀರಿ, ಯಾವೊಬ್ಬ ನೈಜ ಹಿಂದೂವಿಗಾದರೂ ಸಂಘಟನೆಗಳ ರಕ್ಷಣೆ ಬೇಕೇ, ಪ್ರಾಮಾಣಿಕ ಮತ್ತು ಸ್ವಾಭಿಮಾನಿಗಳಾಗಿರುವ ಹಿಂದೂ ಮತ್ತು ಮುಸ್ಲಿಮರಿಗೆ ಸಂಘಟನೆಗಳ ಅಗತ್ಯ ಉಂಟೇ, ಜಿಲ್ಲೆಯಲ್ಲಿರುವುದು ತಾಲಿಬಾನ್ ಸಂಸ್ಕೃತಿಯೇ ಅಥವಾ ಹಿಂದೂ ಸಂಸ್ಕೃತಿಯೇ ಎಂದು ಪ್ರಶ್ನಿಸಿದರು.

ಕಾನೂನು ಬಾಹಿರ ಮತ್ತು ಸಮಾಜ ಬಾಹಿರ ಕೃತ್ಯಗಳಲ್ಲಿ ತೊಡಗಿಕೊಂಡವರಿಗೆ ಮಾತ್ರ ಸಂಘಟನೆಗಳ ರಕ್ಷಣೆ ಬೇಕಾಗಿದೆ. ಆದರೆ ನೈಜ ಹಿಂದೂಗಳಿಗೆ ಈ ಸಂಘಟನೆಗಳ ರಕ್ಷಣೆ ಬೇಕಾಗಿಲ್ಲ ಎಂದ ಅವರು ಸಂಘಟನೆಗಳು ದ್ವಂದ್ವ ನೀತಿಗಳನ್ನು ಬಿಟ್ಟು ಅಭಿವೃದ್ಧಿಯತ್ತ ಮನಸ್ಸು ಮಾಡಬೇಕು ಎಂದು ಆಗ್ರಹಿಸಿದರು. ಪುತ್ತೂರಿನ ಶಾಸಕಿ ಶಕುಂತಳಾ ಶೆಟ್ಟಿ ಅವರು ಕಳೆದ 4 ವರ್ಷದ ಅವಧಿಯಲ್ಲಿ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ ಅವರೇನು ಮಾಡಿದ್ದಾರೆ ಎಂದು ಇಲ್ಲಿನ ಬಿಜೆಪಿಯವರು ಪ್ರಶ್ನಿಸುತ್ತಿದ್ದಾರೆ. ಕಳೆದ 25 ವರ್ಷಗಳಿಂದ ಇಲ್ಲಿ ಬಿಜೆಪಿ ಸಂಸದರಿದ್ದಾರೆ. 20 ವರ್ಷಗಳ ಅವಧಿಯಲ್ಲಿ ಬಿಜೆಪಿ ಶಾಸಕರಿದ್ದರು. 15 ವರ್ಷಗಳಿಂದ ಬಿಜೆಪಿ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಆಡಳಿತವಿದೆ. ಪುತ್ತೂರು ಎಪಿಎಂಸಿ ಮತ್ತು ಕ್ಯಾಂಪ್ಕೋ ಬಿಜೆಪಿ ಕೈಯಲ್ಲಿದೆ. ಹೀಗಿದ್ದರೂ ಪುತ್ತೂರು ಕ್ಷೇತ್ರಕ್ಕೆ ಬಿಜೆಪಿ ಕೊಡುಗೆ ಏನು ಎಂದು ಪ್ರಶ್ನಿಸಿದ ಶಿವನಾಥ ರೈ ಅವರು ಶಾಸಕಿ ಶಕುಂತಳಾ ಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಿಸಿ ಕಾಂಗ್ರೆಸ್ ಕಾರ್ಯಕರ್ತರು ಅಳವಡಿಸಿದ ಬ್ಯಾನರ್‌ಗಳನ್ನು ಬಿಜೆಪಿಗರು ಹರಿದು ಹಾಕುತ್ತಿದ್ದಾರೆ. ಇದುವೇ ಅವರ ಕೆಲಸ-ಸಾಧನೆ ಎಂದು ಲೇವಡಿ ಮಾಡಿದರು.

ಬಿಜೆಪಿಯ ಹಲವು ಸಂಸದರು ಕಸಾಯಿಖಾನೆ ನಡೆಸುತ್ತಿದ್ದಾರೆ. ಗುಜರಾತಿನ ಸಂಸದರೊಬ್ಬರು ಗೋಮಾಂಸ ರಫ್ತಿನಲ್ಲಿ ನಂಬರ್ ಒನ್ ಆಗಿದ್ದಾರೆ. ವಿದೇಶಕ್ಕೆ ಗೋಮಾಂಸ ರಫ್ತು ಮಾಡಲಾಗುತ್ತಿದ್ದು, ಇದು ಗೋಹತ್ಯೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು ಯಾವುದೇ ಗೋವುಗಳನ್ನು ಕಡಿಯಬಾರದು ಎಂದು ಹೇಳಿದರೆ ಮುದಿ ಆಕಳು, ಎತ್ತುಗಳನ್ನು ನಾವು ಏನು ಮಾಡಬೇಕು ಎಂದು ಪ್ರಶ್ನಿಸಿದರು. ಮೋದಿ ಅವರ ನೋಟು ರದ್ಧತಿ, ಜಿಎಸ್‌ಟಿ ನೀತಿಗಳಿಂದಾಗಿ ಅಡಿಕೆ,ರಬ್ಬರ್ ಧಾರಣೆ ಕುಸಿಯತೊಡಗಿದ್ದು, ಅಕ್ಕಿ ಸೇರಿದಂತೆ ದಿನ ಬಳಕೆಯ ವಸ್ತುಗಳ ಧಾರಣೆಯೂ ಏರಿಕೆಯಾಗಿದೆ. ಎಟಿಎಂಸಿನಿಂದ ಹಣ ಪಡೆಯಲು, ಬ್ಯಾಲೆನ್ಸ್ ನೋಡಲು ಕೂಡ ಹಣಕಳೆದುಕೊಳ್ಳುವ ಸ್ಥಿತಿ ಬಂದಿದ್ದು, ಬಡವರು ಹಾಗೂ ಮಧ್ಯಮ ವರ್ಗದ ಮಂದಿ ಬದುಕಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಪುತ್ತೂರು ತಾಲೂಕು ಯುವ ಕಾಂಗ್ರೆಸ್ ಕಾರ್ಯದರ್ಶಿ ರೋಶನ್ ರೈ ಬನ್ನೂರು, ಕಾಂಗ್ರೆಸ್ ಪ್ರಮುಖರಾದ ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಸುದೇಶ್ ಚಿಕ್ಕಪುತ್ತೂರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News