×
Ad

ಒಡಿಯೂರು ಗುರುಸೇವಾ ಬಳಗದಿಂದ ರಕ್ತದಾನ

Update: 2017-07-06 18:38 IST

ಪುತ್ತೂರು, ಜು.6: ಗುರುದೇವಾ ಸೇವಾ ಬಳಗ ಪುತ್ತೂರು, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸಹಭಾಗಿತ್ವದಲ್ಲಿ ಒಡಿಯೂರು ಶ್ರೀಗಳ ಜನ್ಮದಿನೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ವಿವಿಧ ಸಮಾಜಮುಖಿ ಸೇವಾ ಕಾರ್ಯಗಳ ಅಂಗವಾಗಿ ಗುರುವಾರ ಪುತ್ತೂರು ಸರಕಾರಿ ಆಸ್ಪತ್ರೆಯ ಬ್ಲಡ್ ಬ್ಯಾಂಕ್‌ನಲ್ಲಿ ಒಡಿಯೂರು ಸೇವಾ ಬಳಗದಿಂದ ರಕ್ತದಾನ ಶಿಬಿರ ನಡೆಯಿತು.

ಶಾಸಕಿ ಶಕುಂತಳಾ ಟಿ. ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ, ರಕ್ತದಾನವು ಮಾನವೀಯತೆಯ ಶ್ರೇಷ್ಠ ಪ್ರತೀಕವಾಗಿದೆ. ಒಡಿಯೂರು ಸೇವಾ ಬಳಗದವರು ಶ್ರೀಗಳ ಜನ್ಮದಿನಾಚರಣೆಯ ಅಂಗವಾಗಿ ನಡೆಸುತ್ತಿರುವ ಸಮಾಜಮುಖಿ ಕೆಲಸಗಳಲ್ಲಿ ರಕ್ತದಾನದಂತಹ ಮಾನವೀಯ ಸೇವೆಯನ್ನು ಸೇರ್ಪಡೆಗೊಳಿಸಿರುವುದು ಶ್ಲಾಘನೀಯ ಮತ್ತು ಅನುಕರಣೀಯ ಎಂದರು.

ಪ್ರಸಕ್ತ ಸನ್ನಿವೇಶದಲ್ಲಿ ರಕ್ತದಾನ ಎಂಬ ಸೇವೆ ಬದ್ಧತೆಯಿಂದ ಸಮಾಜದಲ್ಲಿ ಅನುಷ್ಠಾನವಾಗಬೇಕು. ಯಾಕೆಂದರೆ ರಕ್ತ ಒಂದು ಅಮೂಲ್ಯ ಜೀವ ರಕ್ಷಕ. ಇದಕ್ಕೆ ಪರ್ಯಾಯವಾಗಿ ಅಥವಾ ಕೃತಕವಾಗಿ ರಕ್ತವನ್ನು ತಯಾರಿಸಲು ಸಾಧ್ಯವಿಲ್ಲ. ಆದ ಕಾರಣ ರಕ್ತದಾನದಂತಹ ಸೇವೆಗೆ ಎಲ್ಲರೂ ಮುಂದಾಗಬೇಕಾದ ಅಗತ್ಯವಿದೆ ಎಂದರು.

ರೋಟರಿ-ಕ್ಯಾಂಪ್ಕೋ ಬ್ಲಡ್ ಬ್ಯಾಂಕ್‌ನ ವೈದ್ಯಾಧಿಕಾರಿ ಡಾ. ರಾಮಚಂದ್ರ ಭಟ್ ರಕ್ತದಾನದ ಮಹತ್ವ ಮತ್ತು ರಕ್ತದಾನಿಗಳ ಕುರಿತು ವಿವರಗಳನ್ನು ನೀಡಿದರು.
ಈ ಸಂದರ್ಭ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ನಯನಾ ರೈ, ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಪ್ರದೀಪ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಚಂದ್ರಶೇಖರ ರೈ, ಹರಿಣಾಕ್ಷಿ ಜೆ. ಶೆಟ್ಟಿ, ಶಾರದಾ ಕೇಶವ್, ಮೀನಾಕ್ಷಿ, ವೈದ್ಯರಾದ ಡಾ. ಜಗದೀಶ್, ಡಾ. ಜಯದೀಪ್ ಸೇರಿದಂತೆ ಮೊದಲಾದವರು ಉಪಸ್ಥತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News