‘ಚುನಾವಣಾ ಆಯೋಗದ ವರ್ಚಸ್ಸಿನ ಬಗ್ಗೆ ಕಾಳಜಿಯಿತ್ತು’

Update: 2017-07-06 13:08 GMT

ಹೊಸದಿಲ್ಲಿ,ಜು.: ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳ ಕುರಿತ ವಿವಾದದುದ್ದಕ್ಕೂ ತಾನು ಚುನಾವಣಾ ಆಯೋಗದ ಋಜುತ್ವ ಮತ್ತು ವರ್ಚಸ್ಸಿನ ಬಗ್ಗೆ ಕಾಳಜಿ ವಹಿಸಿದ್ದೆನೇ ಹೊರತು ತನ್ನ ವೈಯಕ್ತಿಕ ಗೌರವದ ಕುರಿತಲ್ಲ ಎಂದು ಬುಧವಾರ ಮುಖ್ಯ ಚುನಾವಣಾ ಆಯುಕ್ತ ಹುದ್ದೆಯಿಂದ ನಿವೃತ್ತರಾದ ನಸೀಂ ಝೈದಿ ಅವರು ಹೇಳಿದ್ದಾರೆ.

  ‘‘ನಾನು ಸಿಟ್ಟಾಗಿರಲಿಲ್ಲ, ಹಾಗೆಂದು ಆರೋಪಗಳನ್ನು ಲಘುವಾಗಿಯೂ ಪರಿಗಣಿಸಿ ರಲಿಲ್ಲ. ಆಯೋಗವು ದಶಕಗಳಿಂದಲೂ ಕಾಯ್ದುಕೊಂಡು ಬಂದಿರುವ ಋಜುತ್ವದ ಬಗ್ಗೆ ನನಗೆ ತೀವ್ರ ಕಾಳಜಿಯುಂಟಾಗಿತ್ತು. ಆಯೋಗದ ಋಜುತ್ವವನ್ನು ಸಂರಕ್ಷಿಸಿಕೊಂಡು ಉಳಿಸಿಕೊಳ್ಳುವುದು ಮತ್ತು ಆಯೋಗದಲ್ಲಿ ಜನತೆಯ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸುವುದು ಹೇಗೆ ಎನ್ನುವುದು ಮಾತ್ರ ಆಗ ನನ್ನ ತಲೆಯಲ್ಲಿತ್ತು. ಅದು ವ್ಯಕ್ತಿಗತವಾಗಿ ನನ್ನ ಕುರಿತ ಪ್ರಶ್ನೆಯಾಗಿರಲಿಲ್ಲ ’’ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಇವಿಎಂ ವಿವಾದ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಝೈದಿ ನುಡಿದರು.

ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆಗಳ ಬಳಿಕವೇ ಆಯೋಗವು ಇವಿಎಂ ಗಳನ್ನು ನಿಯೋಜಿಸಿತ್ತು ಮತ್ತು ಅವುಗಳಲ್ಲಿ ಹಸ್ತಕ್ಷೇಪ ಸಾಧ್ಯವಿಲ್ಲ ಎಂದು ಹಲವಾರು ತಜ್ಞರ ಸಮಿತಿಗಳು ಸ್ಪಷ್ಟಪಡಿಸಿದ್ದವು. ಹೀಗಾಗಿ ಇವಿಎಂ ವಿವಾದ ಅಗತ್ಯವೇ ಇರಲಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಇವೇ ಇವಿಎಂಗಳನ್ನು ಬಳಸಿ, 2004ರಿಂದ 2014ರವರೆಗೆ 107 ವಿಧಾನಸಭಾ ಮತ್ತು ಮೂರು ಸಾರ್ವತ್ರಿಕ ಚುನಾವಣೆಗಳನ್ನು ನಾವು ನಡೆಸಿದ್ದೇವೆ. ಅವು ಯಾವಾಗಲೂ ಸರಿಯಾದ ಫಲಿತಾಂಶಗಳನ್ನೇ ನೀಡಿವೆ ಎಂದು ಝೈದಿ ಹೇಳಿದರು.

ರಾಜಕೀಯ ಪಕ್ಷಗಳು ನಿರಾಧಾರ ಆರೋಪಗಳನ್ನು ಹೊರಿಸುವ ಬದಲು ಸಾಕ್ಷ ಅಥವಾ ನಂಬಲರ್ಹ ಮಾಹಿತಿಯ ಜೊತೆಗೆ ಇವಿಎಂ ತಿರುಚಿದ ನಿರ್ದಿಷ್ಟ ಪ್ರಕರಣಗಳನ್ನು ಬೆಟ್ಟು ಮಾಡಬೇಕಾಗಿತ್ತು ಎಂದು ಹೇಳಿದ ಝೈದಿ, ಆದರೆ ನಮಗೆ ಇಂತಹ ಯಾವುದೇ ಸಾಕ್ಷ ಲಭಿಸಿರಲಿಲ್ಲ, ಇಂದಿಗೂ ನಾವು ಸಾಕ್ಷಗಳಿಗಾಗಿ ಕಾಯುತ್ತಿದ್ದೇವೆ ಎಂದರು.

ಇವಿಎಂ ವಿಶ್ವಾಸಾರ್ಹತೆಯನ್ನು ಇನ್ನಷ್ಟು ಹೆಚ್ಚಿಸಬಲ್ಲ ಸಲಹೆಗಳು ಮತ್ತು ಕ್ರಮಗಳನ್ನು ಆಯೋಗವು ಸದಾ ಸ್ವಾಗತಿಸುತ್ತದೆ ಎಂದು ಅವರು ಹೇಳಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News