×
Ad

ಜನವಸತಿ ಪ್ರದೇಶಕ್ಕೆ ಬಾರ್ ಸ್ಥಳಾಂತರ: ವಿರೋಧ

Update: 2017-07-06 18:42 IST

ಪಡುಬಿದ್ರಿ,ಜು.6: ಶಾಲೆ ಹಾಗೂ ಜನವಸತಿ ಇರುವ ಪ್ರದೇಶಕ್ಕೆ ಕಾನೂನು ಮೀರಿ ಬಾರ್ ಸ್ಥಳಾಂತರಿಸಲು ಪ್ರಯತ್ನ ನಡೆಯುತಿದ್ದು, ಒಂದು ವೇಳೆ ಬಾರ್ ಈ ಪ್ರದೇಶದಲ್ಲಿ ಸ್ಥಾಪನೆಯಾದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿ ಪಡುಬಿದ್ರಿ ಗ್ರಾಮ ಶಾಖೆಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಚ್ಚರಿಕೆ ನೀಡಿದ್ದಾರೆ.

ಕಾಪುವಿನ ಪ್ರೆಸ್‍ಕ್ಲಬ್‍ನಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಡುಬಿದ್ರಿ ಪೇಟೆಯಲ್ಲಿ ಕಾರ್ಯಾಚರಿಸುತ್ತಿದ್ದ ನವರಂಗ್ ಬಾರ್ ಅನ್ನು ಪಡುಬಿದ್ರಿ ಬೋರ್ಡ್ ಶಾಲೆ ಸನಿಹದಲ್ಲಿ ಸ್ಥಾಪಿಸಲು ಕಾಮಗಾರಿ ನಡೆಯುತ್ತಿದೆ. ಭೂಪರಿವರ್ತನೆಯಾಗದೆ ಈ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಲು ಸ್ಥಳೀಯ ಗ್ರಾಮ ಪಂಚಾಯ್ತಿ ಪರವಾನಿಗೆ ನೀಡಿರುವುದು ಆಕ್ಷೇಪಾರ್ಹ ಎಂದು ಅಸಮಾಧನ ವ್ಯಕ್ತಪಡಿಸಿದರು.

ಬಾರ್ ಸ್ಥಳಾಂತರ ಮಾಡಲುದ್ದೇಶಿಸಿದ ಜಮೀನಿನ ಆಸುಪಾಸಿನ 40 ಮೀಟರ್ ಅಂತರದಲ್ಲಿ  ಪ್ರಾಥಮಿಕ ಆರೋಗ್ಯ ಕೇಂದ್ರ, 30 ಮೀಟರ್ ಅಂತರದಲ್ಲಿ ಸರ್ಕಾರಿ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳು ಕಾರ್ಯಾಚರಿಸುತ್ತಿವೆ. ಅಲ್ಲದೆ ಮುಸಲ್ಮಾನರ ಪ್ರಾರ್ಥನಾ ಮಂದಿರ, ಉರ್ದು ಅನುದಾನಿತ ಶಾಲೆ, ದಲಿತ ಕಾಲನಿ, ದೈವಸ್ಥಾನ, ಖಡ್ಗೇಶ್ವರಿ ಬ್ರಹ್ಮಸ್ಥಾವೂ ಇದ್ದು, ಜನವಸತಿ ಪ್ರದೇಶವಾಗಿದೆ ಎಂದು ಅವರು ತಿಳಿಸಿದರು.

ಇಲ್ಲಿ ಬಾರ್ ಸ್ಥಳಾಂತರ ಮಾಡದಂತೆ ಜಿಲ್ಲಾಧಿಕಾರಿ, ಅಬಕಾರಿ ಇಲಾಖೆಗೆ ಮನವಿ ಮಾಡಲಾಗಿದೆ. ಬಾರ್ ಮಾಲೀಕರು ರಾಜಕೀಯ ಬಳಸಿ ಸ್ಥಳಾಂತರಿಸಲು ಮುಂದಾಗಿರುವುದು ಖಂಡನೀಯ. ಶಾಸಕ ವಿನಯ ಕುಮಾರ್ ಸೊರಕೆಯವರು ಇಲ್ಲಿ ಬಾರ್ ಸ್ಥಾಪನೆಗೆ ಅವಕಾಶ ಮಾಡುವಂತೆ ಸ್ಥಳೀಯ ಜನರ ಮನವೊಲಿಸಲು ಮುಂದಾಗಿರುವುದು ತಪ್ಪು ಎಂದು ಅವರು ದೂರಿದರು. ಯಾವುದೇ ಕಾರಣಕ್ಕೂ ಬಾರ್ ಸ್ಥಳಾಂತರಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಶಾಲೆಯ ಕೆಲವೇ ಮೀಟರ್ ಅಂತರದಲ್ಲಿ ಬಾರ್ ನಿರ್ಮಾಣವಾಗುವುದರಿದ ಈಗಾಗಲೇ ಸಂಕಷ್ಟದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳು ಗಂಭೀರ ತೊಂದರೆಗೊಳಗಾಗಿದೆ. ಮುಂದಿನ ದಿನಗಳಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಾರೆ. ಅಲ್ಲದೆ ಸಾಮಾನ್ಯ ನಾಗರಿಕರೂ ಓಡಾಡುವುದು ಕಷ್ಟಕರ. ಇದರಿಂದ ಪರಿಸರದ ಸ್ವಾಸ್ತ್ಯ ಕೆಡುತ್ತದೆ ಎಂದರು.

ಡಿಎಸ್‍ಎಸ್ ಸಂಚಾಲಕ ಹರಿಶ್ಚಂದ್ರ ಕಲ್ಲಟ್ಟೆ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್, ಪಡುಬಿದ್ರಿ ಘಟಕದ ಅಧ್ಯಕ್ಷ ಮೊಹಮ್ಮದ್ ಆಸಿಫ್, ಜೈ ಕರ್ನಾಟಕ ಪಡುಬಿದ್ರಿ ಘಟಕದ ಅಧ್ಯಕ್ಷ ಸಿ.ಪಿ. ಅಬ್ದುಲ್ ರಹಿಮಾನ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News