×
Ad

ಯುವಪ್ರತಿಭೆಗಳ ಕಲಾ ಮಾಧ್ಯಮಗಳ ಸಂಗಮ ‘ಝೀನ್ಕ್ಸ್’

Update: 2017-07-06 18:47 IST

ಮಂಗಳೂರು, ಜು.6: ಚಿತ್ರಕಲೆ, ಗ್ರಾಫಿಕ್ಸ್, ವಾಸ್ತುಶಿಲ್ಪ, ಫೋಟೋಗ್ರಫಿ ಇವೆಲ್ಲವುಗಳ ಸಂಗಮದ ಉದ್ಯಮವೊಂದನ್ನು ವಿಭಿನ್ನ ಹಾಗೂ ವಿನೂತನ ಶೈಲಿಯಲ್ಲಿ ನಡೆಸಬಹುದು ಎಂಬುದನ್ನು ಮಂಗಳೂರಿನಲ್ಲಿ ನಾಲ್ವರು ಯುವ ಕಲಾವಿದರು ಸಾಬೀತುಪಡಿಸಲು ಮುಂದಾಗಿದ್ದಾರೆ.

ಮಂಗಳೂರಿನ ರವಿಕಿರಣ್, ತಂಝಿನ್, ಕುಂದಾಪುರದ ಸೈಯದ್ ಫರ್ವೇಝ್ ಹಾಗೂ ಕಾಸರಗೋಡಿನ ಅಶಿತ್ ಕೃಷ್ಣ ಎಂಬ ನಾಲ್ವರು ಸೇರಿಕೊಂಡು ನಗರದ ಬೆಂದೂರ್ ಬಳಿಯ ಮರ್ಕೇರಾ ಹಿಲ್ ರಸ್ತೆಯಲ್ಲಿ ‘ಝೀನ್ಕ್ಸ್’ ಪ್ರೈ.ಲಿ. ಎಂಬ ವಿನೂತನ ಕಲ್ಪನೆಯ ಸ್ಟುಡಿಯೋವೊಂದನ್ನು ಆರಂಭಿಸಿದ್ದಾರೆ.

ಇವರಲ್ಲಿ ರವಿ ಕಿರಣ್ ಸಿವಿಲ್ ಇಂಜಿನಿಯರ್ ಆಗಿದ್ದು, ಸ್ಟ್ರಕ್ಚರಲ್ ವಿನ್ಯಾಸಗಳನ್ನು ರೂಪಿಸುವಲ್ಲಿ ನಿಪುಣ. ಫರ್ವೇಝ್ ಚಿತ್ರಕಲೆ ಹಾಗೂ ಗ್ರಾಫಿಕ್‌ನಲ್ಲಿ ಪರಿಣತಿ ಹೊಂದಿದ್ದಾರೆ. ಅಶಿತ್ ಇಲೆಕ್ಟ್ರಾನಿಕ್ ಇಂಜಿನಿಯರಾಗಿದ್ದು, ಫೋಟೋಗ್ರಫಿಯಲ್ಲಿ ಪರಿಣಿತರು. ತಂಝಿನ್ ವೆಬ್ ಡಿಸೈನರ್ ಆಗಿದ್ದಾರೆ. ಇವರೆಲ್ಲರೂ ತಮ್ಮಲ್ಲಿರುವ ಕಲಾ ಪ್ರತಿಭೆಗಳನ್ನು ಒಂದೇ ಸೂರಿನಡಿ ತಂದು ಗ್ರಾಹಕರಿಗೆ ವಿನೂತನ ಸೇವೆ ನೀಡಲು ಮುಂದಾಗಿದ್ದಾರೆ.

ಕಟ್ಟಡದ ವಿನ್ಯಾಸದಿಂದ ಹಿಡಿದು, ಚಿತ್ರಕತೆಗೆ ತಕ್ಕುದಾದ ಚಿತ್ರಕಲೆಗಳ ರಚನೆ, ಕಂಪ್ಯೂಟರ್ ಇಲಸ್ಟ್ರೇಶನ್, ಕಾರ್ಟೂನ್ಸ್‌, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್ ರಚನೆಯಲ್ಲಿ ನೆರವಿನ ಜತೆಗೆ ಕಲೆ ಮತ್ತು ಫೋಟೋಗ್ರಫಿ ಒಂದೇ ಸಂಸ್ಥೆಯಡಿ ಲಭ್ಯವಾಗಲಿದೆ. ಇವಲ್ಲದೆ, ಗೋಡೆಗಳಲ್ಲಿ ಚಿತ್ರಕಲೆಗಳನ್ನು ಕೂಡಾ ಇವರು ರಚಿಸಬಲ್ಲರು. ಪೆನ್ಸಿಲ್ ಸ್ಕೆಚ್, ಅಕ್ರೆಲಿಕ್, ಗ್ರಾಫಿಟಿ, ವಾಟರ್ ಕಲರ್, ಚಾರ್ಕೋಲ್ ಮೊದಲಾದ ಮಾಧ್ಯಮಗಳಲ್ಲೂ ಚಿತ್ರಕಲೆಗಳನ್ನು ಇವರು ರೂಪಿಸಬಲ್ಲರು.

ನಾಲ್ವರು ಕಲಾವಿದರಿಂದ ರಚಿಸಲ್ಪಟ್ಟ ಕಲಾಕೃತಿಗಳೊಂದಿಗೆ ಆಕರ್ಷಿಸುವ ‘ಝೀನ್ಕ್ಸ್’, ಆರ್ಟ್ ಸ್ಟೂಡಿಯೋವನ್ನು ಕೂಡಾ ಹೊಂದಿದೆ. ಅಲ್ಲಿ ಆಸಕ್ತ ಕಲಾ ವಿದ್ಯಾರ್ಥಿಗಳಿಗೆ ಕಲಾವಿದರ ಮೂಲಕ ಕಾರ್ಯಾಗಾರಗಳನ್ನು ನಡೆಸುವ ಚಿಂತನೆಯೂ ಇದೆ.

‘‘ಕುಡ್ಲ ಕಲಾಮೇಳದಲ್ಲಿ ನಾವು ನಾಲ್ವರು ಒಂದಾದೆವು. ಕಲೆಗಳಲ್ಲಿ ವಿಶೇಷ ಆಸಕ್ತಿ ಇರುವುದರಿಂದ ನಾವು ಕಲೆಯಲ್ಲಿ ಪಡೆದಿರುವ ಶಿಕ್ಷಣವನ್ನು ಉಪಯೋಗಿಸಿಕೊಂಡು ನಮ್ಮ ವೃತ್ತಿ ನೈಪುಣ್ಯದೊಂದಿಗೆ ‘ಝೀನ್ಕ್ಸ್’ ಸಂಸ್ಥೆಯನ್ನು ಪಾಲುದಾರಿಕೆಯಲ್ಲಿ ಪ್ರಾಂಭಿಸಿದ್ದೇವೆ’’ ಎನ್ನುತ್ತಾರೆ ಫರ್ವೇಝ್.

‘‘ನಾವು ವೆಬ್‌ಡಿಸೈನಿಂಗ್ ಮತ್ತು ಡೆವಲಪ್‌ಮೆಂಟ್, ಡಿಜಿಟಲ್ ಮಾರ್ಕೆಟಿಂಗ್ ಮತ್ತು ಬ್ರಾಂಡಿಂಗ್, ಸಿವಿಲ್ ಮತ್ತು ಸ್ಟ್ರಕ್ಚರಲ್ ಕನ್ಸಲ್ಟೆಂಟ್ಸ್, ಆರ್ಟ್ ಮತ್ತು ಫೋಟೋಗ್ರಫಿ ಈ ನಾಲ್ಕು ವಿಭಾಗಗಳಲ್ಲಿ ವಿವಿಧ ಸೃಜನಶೀಲ ಸೇವೆಗಳನ್ನು ನೀಡುತ್ತಿದ್ದೇವೆ. ಈಗಾಗಲೇ ಕಂಪ್ಯೂಟರ್ ಗ್ರಾಫಿಕ್ಸ್, ಡಿಸೈನಿಂಗ್‌ನಿಂದ ಹಿಡಿದು ಎಲ್ಲಾ ರೀತಿಯ ಕಲಾ ಮಾಧ್ಯಮಗಳೂ ಒಂದೇ ಕಡೆ ಸಿಗುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಯನ್ನು ರೂಪಿಸಿದ್ದೇವೆ’’ ಎನ್ನುತ್ತಾರೆ ರವಿಕಿರಣ್.

"ಉಮಿಲ್" ಚಿತ್ರಕ್ಕೆ ಪೋಸ್ಟರ್, ಸ್ಟೋರಿಬೋರ್ಡ್

"ಚಲನಚಿತ್ರವೊಂದರ ಪಾತ್ರಗಳ ಸನ್ನಿವೇಶಗಳನ್ನು ವಿನ್ಯಾಸ ನೀಡಿ ರೂಪಿಸುವ ಸ್ಟೋರಿ ಬೋರ್ಡ್ ರಚನೆಯನ್ನು ನಾವು ಮಾಡುತ್ತಿದ್ದೇವೆ. ಬಾಲಿವುಡ್ ಹಾಗೂ ಹಾಲಿವುಡ್‌ನಲ್ಲಿ ಈ ಪರಿಕಲ್ಪನೆ ಇದೆ. ತುಳು ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ‘ಉಮಿಲ್’ ಚಿತ್ರದ ಸ್ಟೋರಿ ಬೋರ್ಡ್ ರಚನೆಯಾಗುತ್ತಿದೆ. ಅದನ್ನು ನಾವು ಮಾಡುತ್ತಿದ್ದೇವೆ. ಈ ಚಿತ್ರದ ಪೋಸ್ಟರ್ ಕೂಡಾ ನಾವು ಮಾಡಿದ್ದೇವೆ’’ ಎನ್ನುತ್ತಾರೆ ಅಶಿತ್ ಕೃಷ್ಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News