ಗ್ರಾಹಕರ ಡೆಬಿಟ್-ಕ್ರೆಡಿಟ್ ಕಾರ್ಡ್ ಗಳ ಕ್ಲೋನಿಂಗ್ ನಡೆಸಿ ಕೆಫೆ ಸಿಬ್ಬಂದಿ ದೋಚಿದ ಹಣವೆಷ್ಟು ಗೊತ್ತೇ?

Update: 2017-07-06 13:33 GMT

ಹೊಸದಿಲ್ಲಿ, ಜು.6: ಗ್ರಾಹಕರ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಕ್ಲೋನಿಂಗ್ ಮಾಡಿದ ಕೆಫೆಯೊಂದರ ಸಿಬ್ಬಂದಿ ಸುಮಾರು 6,03,500 ರೂ.ಗಳನ್ನು ದೋಚಿದ ಘಟನೆ ಬೆಳಕಿಗೆ ಬಂದಿದೆ.

ಇಲ್ಲಿನ ಫರ್ಝಿ ಕೆಫೆಗೆ ಬರುತ್ತಿದ್ದ ಗ್ರಾಹಕರ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಕ್ಲೋನಿಂಗ್ ಮಾಡಿ ಹಣ ದೋಚಲಾಗಿದೆ. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಗಳ ವಿವರಗಳನ್ನು ಪಡೆದುಕೊಂಡು ಡುಪ್ಲಿಕೇಟ್ ಕಾರ್ಡ್ ಗೆ ಅದನ್ನು ನಕಲಿ ಮಾಡಿ ಈ ಮೂಲಕ ಹಣ ದೋಚುವ ತಂತ್ರವಾಗಿದೆ “ಕಾರ್ಡ್ ಕ್ಲೋನಿಂಗ್”.

“ತಮ್ಮ ಗ್ರಾಹಕರ ಡೆಬಿಟ್ ಕಾರ್ಡ್ ಗಳನ್ನು ಕ್ಲೋನಿಂಗ್ ಮಾಡಿರುವ ಬಗ್ಗೆ ಎಚ್ ಡಿಎಫ್ ಸಿ ಬ್ಯಾಂಕ್ ದೂರು ನೀಡಿತ್ತು. ಗ್ರಾಹಕರ ಅರಿವಿಗೆ ಬಾರದಂತೆ ಅವರ ಖಾತೆಯಿಂದ ವಹಿವಾಟು ನಡೆಸಲಾಗಿದೆ, ಅದು ಫರ್ಝಿ ಕೆಫೆಯಲ್ಲಿ ನಡೆದಿದೆ ಎನ್ನಲಾಗಿತ್ತು. ಇಂತಹ 13 ಪ್ರಕರಣಗಳು ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಅದರಂತೆ ಪ್ರಕರಣ ದಾಖಲಿಸಿಕೊಂಡ ನಾವು ತನಿಖೆ ಆರಂಭಿಸಿದ್ದು, ವಂಚಕನನ್ನು ಪತ್ತೆಹಚ್ಚಿದೆವು. ತನಿಖೆ ಮುಂದುವರಿದಿದ್ದು, ತಲೆಮರೆಸಿಕೊಂಡಿರುವ ಆರೋಪಿಯನ್ನು ಶೀಘ್ರ ಬಂಧಿಸಲಾಗುವುದು” ಎಂದು ಹೊಸದಿಲ್ಲಿಯ ಡಿಸಿಪಿ ಬಿ.ಕೆ. ಸಿಂಗ್ ಹೇಳಿದ್ದಾರೆ.

“ಗ್ರಾಹಕರಿಂದ ಕಾರ್ಡ್ ಪಡೆದುಕೊಳ್ಳುವ ಆತ ತಕ್ಷಣ ಕ್ಲೋನಿಂಗ್ ನಡೆಸುತ್ತಿದ್ದ. ನಂತರ ಗ್ರಾಹಕರು ಉಪಯೋಗಿಸುವ ಪಿನ್ ಕೋಡನ್ನು ಗಮನಿಸಿ ವಂಚನೆ ನಡೆಸುತ್ತಿದ್ದ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News