ಮೋದಿ ಸರಕಾರದ ಜಿಎಸ್‌ಟಿ ಒಂದು ಅಣಕ: ಚಿದಂಬರಂ

Update: 2017-07-06 14:42 GMT

ಹೊಸದಿಲ್ಲಿ, ಜು.6: ಮೋದಿ ಸರಕಾರದ ಜಿಎಸ್‌ಟಿ ಅತ್ಯಂತ ದೋಷಯುಕ್ತವಾಗಿದ್ದು , ಏಳಕ್ಕೂ ಹೆಚ್ಚು ತೆರಿಗೆ ಇರುವ ಕಾರಣ ಇದನ್ನು ‘ಒಂದು ದೇಶ ಒಂದು ತೆರಿಗೆ’ ಎಂದು ವರ್ಗೀಕರಿಸಲಾಗದು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹೇಳಿದ್ದಾರೆ.

 ತೆರಿಗೆ ದರ ಕಡಿಮೆಗೊಳಿಸಬೇಕೆಂದು ಮತ್ತು ಗರಿಷ್ಠ ತೆರಿಗೆ ಮಿತಿ ಶೇ.18 ಇರಬೇಕೆಂದು ಕಾಂಗ್ರೆಸ್ ಒತ್ತಾಯಿಸಲಿದೆ . ಅಲ್ಲದೆ ಪೆಟ್ರೋಲಿಯಂ ಉತ್ಪನ್ನಗಳು, ಇಲೆಕ್ಟ್ರಿಸಿಟಿ, ರಿಯಲ್ ಎಸ್ಟೇಟ್ ವ್ಯವಹಾರವನ್ನೂ ಜಿಎಸ್‌ಟಿ ವ್ಯಾಪ್ತಿಗೆ ತರಬೇಕೆಂದು ನಾವು ಬಯಸುತ್ತೇವೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ವಿತ್ತ ಸಚಿವ ಚಿದಂಬರಂ ಹೇಳಿದ್ದಾರೆ.

  ಇದೊಂದು ಅತ್ಯಂತ ಅಪೂರ್ಣ , ದೋಷಯುಕ್ತ ನಿಯಮವಾಗಿದೆ. ಯುಪಿಎ ಪರಿಕಲ್ಪನೆಯ ಜಿಎಸ್‌ಟಿ ಇದಾಗಿಲ್ಲ. ಏಳು ಅಥವಾ ಅದಕ್ಕಿಂತಲೂ ಹೆಚ್ಚಿನ ತೆರಿಗೆ ಪ್ರಮಾಣ ಇರುವ ಇದು ಜಿಎಸ್‌ಟಿಯ ಅಣಕವಾಗಿದೆ. 0.25, 3,5,12,18,28 ಮತ್ತು 40 ಈ ಪ್ರಮಾಣದಲ್ಲಿ ತೆರಿಗೆ ವಿಧಿಸಬಹುದು. ಅಲ್ಲದೆ ರಾಜ್ಯ ಸರಕಾರದ ನಿರ್ದೇಶನಕ್ಕೆ ಅನುಗುಣವಾಗಿ ಅದಕ್ಕಿಂತಲೂ ಹೆಚ್ಚು ಇರಬಹುದು. ಹೀಗಿರುವಾಗ ಇದನ್ನು ‘ಒಂದು ದೇಶ, ಒಂದು ತೆರಿಗೆ’ ಎಂದು ಹೇಗೆ ಕರೆಯಲು ಸಾಧ್ಯ ಎಂದವರು ಪ್ರಶ್ನಿಸಿದರು.

   ಜಿಎಸ್‌ಟಿ ಜಾರಿಯ ಬಳಿಕದ ಪರಿಸ್ಥಿತಿಯನ್ನು ಕಾಂಗ್ರೆಸ್ ಎಚ್ಚರಿಕೆಯಿಂದ ಗಮನಿಸಲಿದೆ ಮತ್ತು ಸಣ್ಣ , ಮಧ್ಯಮ ವರ್ಗದ , ಅಂತರಾಜ್ಯ ವ್ಯಾಪಾರಿಗಳು ಹಾಗೂ ಗ್ರಾಹಕರ ಆತಂಕ ಮತ್ತು ಅಸಮಾಧಾನಗಳಿಗೆ ಧ್ವನಿಯಾಗಲಿದೆ ಎಂದು ಚಿದಂಬರಂ ತಿಳಿಸಿದರು.

   ಜಿಎಸ್‌ಟಿ ಜಾರಿಯ ಬಗ್ಗೆ ಅಧಿಕಾರಿಗಳು ಹಾಗೂ ವ್ಯಾಪಾರಿಗಳು ಸಿದ್ಧಗೊಂಡಿರಲಿಲ್ಲ. ಜಿಎಸ್‌ಟಿಯನ್ನು ತರಾತುರಿಯಲ್ಲಿ ಜಾರಿಗೊಳಿಸುವ ಬದಲು ಎರಡು ತಿಂಗಳು ಮುಂದೂಡಬೇಕಿತ್ತು. ಸರಕು ಸೇವಾ ತೆರಿಗೆ ಅಂತರ್ಜಾಲವನ್ನು ಪರೀಕ್ಷಾರ್ಥ ನಡೆಸಬೇಕಿತ್ತು ಎಂದ ಅವರು, ಜಿಎಸ್‌ಟಿ ಕಾಂಗ್ರೆಸ್ ಕಲ್ಪನೆಯ ಕೂಸಾಗಿದೆ ಎಂಬುದನ್ನು ತಿಳಿಸಲು ಮತ್ತು ನಿಜವಾದ ಜಿಎಸ್‌ಟಿ ಜಾರಿಗೆ ಬರಬೇಕೆಂದು ಒತ್ತಾಯಿಸಿ ದೇಶಾದ್ಯಂತ ಸಮ್ಮೇಳನಗಳನ್ನು ಆಯೋಜಿಸಲಾಗುವುದು ಎಂದರು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರದ ಅವಧಿಯಲ್ಲಿ ಪರಿಕಲ್ಪಿಸಲಾದ ಜಿಎಸ್‌ಟಿ ಇದಲ್ಲ ಎಂದು ಬಿಜೆಪಿ ನಾಯಕ ಮತ್ತು ಮಾಜಿ ವಿತ್ತ ಸಚಿವ ಯಶವಂತ್ ಸಿನ್ಹ ಅವರೇ ಹೇಳಿದ್ದಾರೆ ಎಂದು ಚಿದಂಬರಂ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News