ಇಸ್ರೇಲ್ ಭಯೋತ್ಪಾದಕ ರಾಷ್ಟ್ರ: ಪಿಣರಾಯಿ
ತಿರುವನಂತಪುರಂ, ಜು.6: ಭಯೋತ್ಪಾದಕರು ಎಂಬ ಆರೋಪದಲ್ಲಿ ಅಮಾಯಕ ಜನರನ್ನು ಹತ್ಯೆ ಮಾಡಿರುವ ಇಸ್ರೇಲ್ ಜೊತೆ ಪ್ರಧಾನಿ ನರೇಂದ್ರ ಮೋದಿ ಮೈತ್ರಿಗೆ ಮುಂದಾಗಿರುವುದು ನಾಚಿಕೆಗೇಡು ಎಂದು ಟೀಕಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಭಾರತೀಯರು ಸದಾ ಫೆಲೆಸ್ತೀನ್ ಜನತೆಯೊಂದಿಗಿದ್ದಾರೆ ಎಂದು ಹೇಳಿದ್ದಾರೆ.
ಅಮಾಯಕರನ್ನು ಕೊಂದ ದೇಶದೊಂದಿಗೆ ಭಯೋತ್ಪಾದಕತೆ ನಿಗ್ರಹ ಒಪ್ಪಂದ ಮಾಡಿಕೊಂಡಿರುವುದು ಅತಾರ್ಕಿಕ ಕ್ರಮವಾಗಿದೆ. ಭಾರತೀಯರ ಹೃದಯವು ಫೆಲೆಸ್ತೀನ್‌ನಲ್ಲಿ ಇಸ್ರೇಲ್ ನಡೆಸಿದ ಅಮಾನುಷ ಕೃತ್ಯದ ವಿರುದ್ಧವಿದೆ ಎಂದವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತಮ್ಮದೇ ನೆಲದಲ್ಲಿ ಸ್ವತಂತ್ರವಾಗಿ ಬದುಕಲು ಪೆಲೆಸ್ತೀನ್ ಜನತೆ ನಡೆಸಿದ ಹೋರಾಟವನ್ನು ನಿರ್ದಯವಾಗಿ ಹತ್ತಿಕ್ಕಿದ ಇಸ್ರೇಲ್ ಕ್ರಮಕ್ಕೆ ಭಾರತದ ವಿರೋಧವಿದೆ ಎಂದವರು ಹೇಳಿದ್ದಾರೆ.
ಅವರ ಹೇಳಿಕೆಯ ಸಾರಾಂಶ ಹೀಗಿದೆ: ಅಮಾಯಕ ಜನರನ್ನು ಹತ್ಯೆ ಮಾಡಿದ ಭಯೋತ್ಪಾದಕ ದೇಶದೊಂದಿಗೆ ಭಯೋತ್ಪಾದಕ ನಿಗ್ರಹ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬ ವಿಶ್ಲೇಷಣೆ ತಮಾಷೆ ಎಂದು ಪರಿಗಣಿಸಲಾಗದು. ಪ್ರಧಾನಿ ಮೋದಿಯವರ ಇಸ್ರೇಲ್ ಭೇಟಿಯನ್ನು ‘ಇಸ್ರೇಲ್‌ನ ಜಾಗತಿಕ ಸಲಹೆಗಾರರ ಜೊತೆ ಒಂದು ವ್ಯೆಹಾತ್ಮಕ ಪಾಲುದಾರಿಕೆ’ ಹಾಗೂ ಅಮೆರಿಕ-ಇಸ್ರೇಲ್-ಭಾರತ ಜೊತೆಗೂಡಿದ ಒಂದು ವ್ಯೆಹಾತ್ಮಕ ಪಾಲುದಾರಿಕೆ ಎಂದು ರೂಪಾಂತರಿಸಲಾಗಿದೆ.
ಆದರೆ ಫೆಲೆಸ್ತೀನ್ ಜನತೆ ತಮ್ಮದೇ ನೆಲದಲ್ಲಿ ಸ್ವತಂತ್ರವಾಗಿ ಬದುಕಲು ನಡೆಸುತ್ತಿರುವ ಹೋರಾಟಕ್ಕೆ ಬಹುದೊಡ್ಡ ಬೆದರಿಕೆಯಾದ ಇಸ್ರೇಲ್ ವಿರುದ್ಧ ಭಾರತೀಯರ ಮನಸ್ಥಿತಿಯಿದೆ. ಯೆಹೂದಿವಾದವು ಯೆಹೂದಿಗಳ ನಾಡಿನಲ್ಲಿ ಯೆಹೂದಿಗಳ ಅಭಿವೃದ್ಧಿಯನ್ನು ಮಾತ್ರ ಹೇಳುತ್ತಿಲ್ಲ, ಇದು ಫೆಲೆಸ್ತೀನನ್ನು ಸರ್ವನಾಶ ಮಾಡಲು ಬಯಸುತ್ತಿದೆ. ಇದನ್ನು ಅರಿತಿರುವ ಭಾರತೀಯರು ಫೆಲೆಸ್ತೀನ್ ಪ್ರತಿಭಟನೆಯ ಪರವಾಗಿಯೇ ಇದ್ದಾರೆ.
ಫೆಲೆಸ್ತೀನಿಯರಿಗೆ ಪೌರತ್ವ ನಿರಾಕರಿಸುತ್ತಿರುವ ಇಸ್ರೇಲ್ ವಿಶ್ವಸಂಸ್ಥೆಯ ನಿರ್ಣಯ ಮತ್ತು ಅಂತಾರಾಷ್ಟ್ರೀಯ ಸಮುದಾಯದ ಆಗ್ರಹವನ್ನು ಬದಿಗೊತ್ತಿ ಜನಾಂಗಬೇಧ ನೀತಿಯನ್ನು ಮುಂದುವರಿಸಿದೆ. ಸಂಘಪರಿವಾರದ ಚಿಂತನೆಯ ಪರಿಣಾಮ ನಾವಿಂದು ಇಸ್ರೇಲ್ ಸೇನೆಯ ಕೋವಿಯ ಬೆಂಕಿಯೆದುರು ನಿಂತಿದ್ದೇವೆ. ಮೋದಿ-ನೆತನ್ಯಾಹು ಜಂಟಿ ಹೇಳಿಕೆಯ ಐಕ್ಯಮತ್ಯವು ಸಂಘಪರಿವಾರ ಮತ್ತು ಯೆಹೂದಿ ಚಿಂತನೆಯ ಐಕ್ಯಮತ್ಯವಾಗಿದೆ. ನಿರಂಕುಶ ಅಧಿಕಾರ, ದ್ವೇಷತ್ವಕ್ಕೆ ಒಮ್ಮತ ದೊರೆತಿದೆ ಎಂದು ಪಿಣರಾಯಿ ಅಭಿಪ್ರಾಯಪಟ್ಟಿದ್ದಾರೆ.
ಇಸ್ರೇಲ್‌ನ ಆಕ್ರಮಣಶೀಲತೆಯನ್ನು ನಿರ್ಲಕ್ಷಿಸಿ ಮೋದಿಯವರ ಇಸ್ರೇಲ್ ಭೇಟಿಯ ಬಗ್ಗೆ ಭಾರೀ ಸಂಭ್ರಮಾಚರಣೆ ನಡೆದಿದೆ. ಫೆಲೆಸ್ತೀನ್ ಪ್ರಾಧಿಕಾರದ ಕೇಂದ್ರ ಸ್ಥಳವಾದ ರಮದಮಕ್ಕೆ ಭೇಟಿ ನೀಡದ ಮೋದಿಯವರ ನಡೆ ಅವರಿಗೆ ಯೆಹೂದಿವಾದದ ಕುರಿತು ಇರುವ ಸಹಾನುಭೂತಿಯ ಪ್ರತೀಕವಾಗಿದೆ ಹಾಗೂ ಈ ಮೂಲಕ ಇಸ್ರೇಲ್ ನಡೆಸಿದ ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳನ್ನು ಪರೋಕ್ಷವಾಗಿ ಬೆಂಬಲಿಸಿದಂತಾಗಿದೆ. ಭಾರತದೊಂದಿಗೆ ಶಸ್ತ್ರಾಸ್ತ್ರ ಮಾರಾಟ ಒಪ್ಪಂದ ಮಾಡಿಕೊಂಡಿರುವ ಇಸ್ರೇಲ್ ಶಸ್ತ್ರಾಸ್ತ್ರ ಮಾರಾಟದಿಂದ ದೊರೆತ ಹಣವನ್ನು ಫೆಲೆಸ್ತೀನ್ ಜನರನ್ನು ದಮನಿಸುವ ಕಾರ್ಯಕ್ಕೆ ಬಳಸಲಿದೆ. ಆಕ್ರಮಿಸಿಕೊಂಡ ದೇಶದ ಜನರನ್ನು ಗುಳೆಹೋಗುವಂತಹ ಸಂಕಟಕ್ಕೆ ದೂಡುವ ಈ ಪ್ರಕ್ರಿಯೆ ಜನರನ್ನು ತೀವ್ರ ತಲ್ಲಣಗೊಳಿಸಿದೆ.