ಬೆಳಪುವಿನಲ್ಲಿ ರಾಷ್ಟ್ರಮಟ್ಟದ ವಿಜ್ಞಾನ ಸಂಶೋಧನಾ ಕೇಂದ್ರದ ಅಭಿವೃದಿಗೆ 120 ಕೋಟಿ ರೂ. ಯೋಜನೆ : ಭೈರಪ್ಪ
ಮಂಗಳೂರು,ಜು.6:ಬೆಳಪುವಿನಲ್ಲಿ ರಾಷ್ಟ್ರ ಮಟ್ಟದ ಉನ್ನತ ಮಟ್ಟದ ವೈಜ್ಞಾನಿಕ ಸಂಶೋಧನಾ ಕೇಂದ್ರದ ಅಭಿವೃದ್ಧಿಗೆ 120 ಕೋಟಿ ರೂಪಾಯಿಯ ಯೋಜನೆ ರೂಪಿಸಲಾಗಿದೆ ಈ ಪೈಕಿ ಪ್ರಥಮ ಹಂತದಲ್ಲಿ ಸರಕಾರದಿಂದ 50 ಕೋಟಿ ರೂ ಬಿಡುಗಡೆ ಮಾಡಲಾಗಿದೆ.ಮುಂದಿನ ಹಂತದಲ್ಲಿ 25 ಕೋಟಿ ರೂ ಬಿಡುಗಡೆ ಮಾಡುವ ಬಗ್ಗೆ ಭರವಸೆ ದೊರೆತಿದೆ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಭೈರಪ್ಪ ತಿಳಿಸಿದ್ದಾರೆ.
ಕೊಣಾಜೆ ಮಂಗಳ ಗಂಗೋತ್ರಿಯ ವಿಶ್ವ ವಿದ್ಯಾನಿಲಯದ ಆಡಳಿತ ಸೌಧದಲ್ಲಿ ವಿಶ್ವ ವಿದ್ಯಾನಿಲಯದ ಶೈಕ್ಷಣಿಕ ಮಂಡಳಿಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಇಂದು ಮಾತನಾಡುತ್ತಿದ್ದರು.
ಮುಂದಿನ ಮೂರು ವರ್ಷದಲ್ಲಿ ಬೆಳಪು ಕೇಂದ್ರದ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನವನ್ನು ಬಳಸಿಕೊಂಡು ಕಾಮಗಾರಿಯನ್ನು ಹಮ್ಮಿಕೊಳ್ಳಬೇಕಾಗಿದೆ.ಮುಂದಿನ ಹಂತದಲ್ಲಿ ಸರಕಾರದಿಂದ 25 ಕೋಟಿ ಹಾಗೂ ವಿಶ್ವ ವಿದ್ಯಾನಿಲಯದಿಂದ 20 ಕೋಟಿ ಸೇರಿದಂತೆ ಒಟ್ಟು 100 ಕೋಟಿ ರೂಗಳನ್ನು ವೆಚ್ಚಮಾಡಿ ಕೇಂದ್ರವನ್ನು ಸುಸಜ್ಜಿತಗೊಳಿಸಲು ಸರಕಾರದಿಂದ ಅನುಮೋದನೆ ದೊರೆತಿದೆ.ಪ್ರಸಕ್ತ ಬೆಳಪು ಪ್ರದೇಶದಲ್ಲಿ 15 ಎಕ್ರೆ ಪ್ರದೇಶದಲ್ಲಿ ಕೇಂದ್ರದ ಅಭಿವೃದ್ಧಿ ಯೋಜನೆ ಹಮ್ಮಿಕೊಳ್ಳಲಾಗಿದೆ ಒಟ್ಟು 35 ಎಕ್ರೆ ಕೇಂದ್ರಕ್ಕೆ ಮಂಜೂರಾಗಿದೆ .ಉಳಿದಂತೆ ಇನ್ನೊಂದು ಹಂತದಲ್ಲಿ ಸರಕಾರಕ್ಕೆ ಇನ್ನೊಂದು ಪ್ರಸ್ತಾವನೆಯನ್ನು ಕಳುಹಿಸಲಾಗುವುದು.ದೇಶದ ಖ್ಯಾತ ವಿಜ್ಞಾನಿ ಡಾ.ಸಿ.ಎನ್.ಆರ್.ರಾವ್ ಅವರನ್ನೊಳಗೊಂಡ ಸಲಹಾ ಸಮಿತಿಯನ್ನು ರಚಿಸಲಾಗಿದೆ.ಪ್ರೊ.ಗೊವರ್ಧನ ಮೆಹ್ತಾ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂದು ಭೈರಪ್ಪ ತಿಳಿಸಿದರು.
ನೆಲ್ಯಾಡಿಯಲ್ಲಿ ವಿಶ್ವ ವಿದ್ಯಾನಿಲಯದ ಕಾಲೇಜು ಸ್ಥಾಪನೆಗೆ 26ಎಕ್ರೆ: ನೆಲ್ಯಾಡಿಯಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಕಾಲೇಜು ಸ್ಥಾಪನೆಗೆ 26ಎಕ್ರೆ ಜಾಗ ನಿಗದಿಪಡಿಸಲಾಗಿದೆ.ಕೊಣಾಜೆಯಲ್ಲೂ ಕಾಲೇಜಿನ ಚಟುವಟಿಕೆ ವಿಸ್ತರಣೆಗೆ 40 ಎಕ್ರೆ ಜಾಗ ಮಂಜೂರಾಗಿದೆ.ಚಿಕ್ಕ ಅಳುವಾರದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಪ್ರಸಕ್ತ 10ಎಕ್ರೆ ಪ್ರದೇಶದಲ್ಲಿದೆ ಇದೀಗ ಸರಕಾರದಿಂದ 35 ಎಕ್ರೆ ಪ್ರದೇಶವನ್ನು ಕೇಂದ್ರಕ್ಕೆ ನೀಡಲಾಗಿದೆ ಎಂದು ಭೈರಪ್ಪ ತಿಳಿಸಿದರು.
ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಸೈಬರ್ ಸೆಕ್ಯೂರಿಟಿ ಡಿಪ್ಲೋಮಾ ಆರಂಭ: ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಸೈಬರ್ ಸೆಕ್ಯೂರಿಟಿ ಒಂದು ವರ್ಷ ದ ಡಿಪ್ಲೋಮಾ ಕೋರ್ಸನ್ನು ಕಂಪ್ಯೂಟರ್ ಶಿಕ್ಷಣ ವಿಭಾಗ ಮೂಲಕ ಆರಂಭಿಸಲಾಗಿದೆ ಜೊತೆ ಮೆಡಿಕಲ್ ಪಿಸಿಕ್ಸ್ ಎಂಬ ನೂತನ ಕೋರ್ಸ್‌ನ್ನು ಆರಂಭಿಸಲು ಕ್ರಮ ಕೈ ಗೊಳ್ಳಲಾಗಿದೆ ಎಂದು ಭ್ಠೈರಪ್ಪ ತಿಳಿಸಿದರು.
ಮಂಗಳೂರು.ವಿ.ವಿ ಗೆ ಸೋಲಾರ್ ಮೇಲ್ಛಾವಣಿ ವಿದ್ಯುತ್ ಯೋಜನೆ : ಕೊಣಾಜೆ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಸುಮಾರು ಒಂಭತ್ತೂವರೆ ಕೋಟಿ ರೂ ವೆಚ್ಚದಲ್ಲಿ ಸೋಲಾರ್ ರೂಫ್ ಟಾಫ್ ವಿದ್ಯುತ್ ಉತ್ಫಾದನೆಯನ್ನು ಆರಂಭಿಸುವ ಯೋಜನೆ ಇದೆ.ಈ ಯೋಜನೆಯ ಮೂಲಕ 650 ಕೆ.ವಿ.ವಿದ್ಯುತ್ ಉತ್ಫಾದಿಸುವ ಗುರಿ ಹೊಂದಲಾಗಿದೆ ಎಂದು ಕೆ.ಭೈರಪ್ಪ ತಿಳಿಸಿದರು.
ಮಂಗಳೂರು ವಿಶ್ವ ವಿದ್ಯಾನಿಲಯ ಪ್ರಸಕ್ತ ರಾಷ್ಟ್ರಮಟ್ಟದಲ್ಲಿನ 450 ವಿಶ್ವ ವಿದ್ಯಾನಿಲಯಗಳ ಪೈಕಿ 19ನೆ ಸ್ಥಾನದಲ್ಲಿದೆ.ವಿಶ್ವ ವಿದ್ಯಾನಿಲಯದ ಗುಣಮಟ್ಟದಲ್ಲಿ ಇಳಿಕೆಯಾಗಿಲ್ಲ ಮುಂದಿನ ಹಂತದಲ್ಲಿ ವಿಶ್ವ ವಿದ್ಯಾನಿಲಯ ರಾಷ್ಟ್ರಮಟ್ಟದಲ್ಲಿ 15ನೆ ಸ್ಥಾನಕ್ಕೆ ಏರುವ ನಿರೀಕ್ಷೆ ಇದೆ ಎಂದು ಭೈರಪ್ಪ ತಿಳಿಸಿದರು.
ಅಧ್ಯಯನ ಪೀಠಗಳಿಗೆ ನಿವೃತ್ತರ ನೇಮಕಾತಿಗೆ ಇಲ್ಲ:-ವಿಶ್ವ ವಿದ್ಯಾನಿಲಯದಲ್ಲಿ ಸ್ಥಾಪಿಸಲಾಗಿರುವ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠಕ್ಕೆ ಸೇವೆಯಲ್ಲಿ ನಿವೃತ್ತರಾದವರನ್ನು ನೇಮಕಾತಿ ಮಾಡದೆ ಹೊಸಬರನ್ನು ನೇಮಿಸಲು ಶೈಕ್ಷಣಿಕ ಮಂಡಳಿ ಅನುಮೋದನೆ ನೀಡಿತು.ಮಂಗಳೂರು ವಿಶ್ವ ವಿದ್ಯಾನಿಲಯದ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲು ಸಹಾಯ ಕೇಂದ್ರ(ಹೆಲ್ಫ್ ಡೆಸ್ಕ್) ಆರಂಭಿಸುವಂತೆ ಸಭೆಯಲ್ಲಿ ಸದಸ್ಯರೊಬ್ಬರು ಪ್ರಸ್ತಾಪಿಸಿದರು.
ಸಂತಾಪ: ಶೈಕ್ಷಣಿಕ ಮಂಡಳಿಯ ಸದಸ್ಯ ಪುತ್ತೂರಿನ ಸಿ.ಪಿ.ಜಯರಾಮ ಗೌಡರ ಅಕಾಲ ನಿಧನಕ್ಕೆ ಸಭೆಯಲ್ಲಿ ಮೌನ ಪ್ರಾರ್ಥನೆಯ ಮೂಲಕ ಸಂತಾಪ ಸೂಚಿಸಲಾಯಿತು.
ಸಭೆಯಲ್ಲಿ ಕುಲಸಚಿವ ಕೆ.ಎಂ.ಲೋಕೇಶ್,ಎ.ಎಂ.ಖಾನ್ ಹಾಗೂ ಹಣಕಾಸು ಅಧಿಕಾರಿ ಶ್ರೀಪತಿ ಕಲ್ಲೂರಾಯ ಮೊದಲಾದವರು ಉಪಸ್ಥಿತರಿದ್ದರು.