ಜಿ.ಎಸ್.ಟಿ: ಅಡಿಕೆ ವಹಿವಾಟಿಗೆ ಕೃಷಿಕರಿಗೆ ಆತಂಕ ಬೇಡ - ಕ್ಯಾಂಪ್ಕೋ

Update: 2017-07-06 14:58 GMT

ಮಂಗಳೂರು,ಜು.6:ನೂತನ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.) ಪದ್ದತಿಯು ಇದೇ ಜುಲೈ 1 ರಿಂದ ಜಾರಿಗೊಂಡಿದ್ದು, ಕ್ಯಾಂಪ್ಕೋ ಇದನ್ನು ಮುಕ್ತವಾಗಿ ಸ್ವಾಗತಿಸಿದೆಯಲ್ಲದೆ, ಈ ನೂತನ ಪದ್ಧತಿಯ ಜಾರಿಗೆ ಬೇಕಾದ ಎಲ್ಲಾ ತಾಂತ್ರಿಕ ವ್ಯವಸ್ಥೆಗಳನ್ನು ಸಿದ್ದಗೊಳಿಸಲಾಗಿದ್ದು, ಸಂಸ್ಥೆಯ ಎಲ್ಲಾ ಶಾಖೆಗಳಲ್ಲಿ ಕೃಷಿಕರಿಂದ ಅಡಿಕೆಯ ನೇರ ಖರೀದಿಗೆ ವ್ಯವಸ್ಥೆಯನ್ನು ಜುಲೈ 3 ರಿಂದಲೇ ಅನುಷ್ಠಾನಗೊಳಿಸಲಾಗಿದೆ.

ಇದೇ ಸಂದರ್ಭದಲ್ಲಿ ಜಿ.ಎಸ್.ಟಿ. ಅನುಷ್ಠಾನದ ನೂತನ ವ್ಯವಸ್ಥೆಗೆ ಬೇಕಾದ ಪೂರ್ವ ಸಿದ್ಧತೆಯನ್ನು ಮಾಡಿಕೊಂಡಿರದ ಕೆಲವು ಏಜೆಂಟ್ ಸೊಸೈಟಿಗಳಿಂದಾಗಿ ಅಡಿಕೆ ವಿಕ್ರಯಿಸಲು ಕೃಷಿಕರಿಗೆ ಅನಾನುಕೂಲವಾಗಿರುವುದಾಗಿ ವರದಿಯಾಗಿದೆ. ಇಂತಹ ಸಂದರ್ಭಗಳಲ್ಲಿ ಆಯಾ ಸಹಕಾರಿ ಸಂಸ್ಥೆಗಳು ಖರೀದಿಗೆ ಬೇಕಾದ ತಾಂತ್ರಿಕ ವ್ಯವಸ್ಥೆಗಳನ್ನು ಸಿದ್ಧಗೊಳಿಸುವವರೆಗೆ ಕೃಷಿಕರು ನೇರವಾಗಿ ತಮ್ಮ ಉತ್ಪನ್ನಗಳನ್ನು ತಮ್ಮ ಸನಿಹದ ಕ್ಯಾಂಪ್ಕೋ ಶಾಖೆಗಳಲ್ಲಿ ವಿಕ್ರಯಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಅಡಿಕೆ ಕೃಷಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ, ಆತಂಕಗೊಳ್ಳಬಾರದೆಂದು ಸಂಸ್ಥೆಯು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಜಿ.ಎಸ್.ಟಿ. ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತಿಳುವಳಿಕೆಗಾಗಿ ಸದಸ್ಯತ್ವ ಹೊಂದಿರುವ ಯಾವುದೇ ಪ್ರಾಥಮಿಕ ಸಹಕಾರಿ ಸಂಸ್ಥೆಗಳು ಕ್ಯಾಂಪ್ಕೋ ಸಂಸ್ಥೆಯನ್ನು ಸಂಪರ್ಕಿಸಲು ಮನವಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News