×
Ad

ಖಾಸಗಿ ಬಸ್ ಮಾಲಕರ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ

Update: 2017-07-06 20:55 IST

ಉಡುಪಿ, ಜು.6: ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಪ್ರಯತ್ನದ ಫಲವಾಗಿ ಜಿಲ್ಲೆಯಾದ್ಯಂತ ಗ್ರಾಮೀಣ ಭಾಗಗಳಲ್ಲಿ ಸಂಚರಿಸಿ ಜನಸ್ನೇಹಿಯಾಗಿದ್ದ ಕೆಎಸ್ಸಾರ್ಟಿಸಿ ನರ್ಮ್ ಬಸ್‌ಗಳ ಸಂಚಾರಕ್ಕೆ ರಾಜ್ಯ ಉಚ್ಛ ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದಿರುವ ಉಡುಪಿ ಖಾಸಗಿ ಬಸ್ ಮಾಲಕರ ವಿರುದ್ಧ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಇಂದು ಸರ್ವಿಸ್ ಬಸ್ ನಿಲ್ದಾಣದ ಬಳಿಯ ಕ್ಲಾಕ್‌ಟವರ್ ಎದುರು ಪ್ರತಿಭಟನೆ ನಡೆಸಲಾಯಿತು.

ಬಿಜೆಪಿಯ ಹಿರಿಯ ನಾಯಕ ಕುಯಿಲಾಡಿ ಸುರೇಶ್ ನಾಯಕ್ ನೇತೃತ್ವದಲ್ಲಿ ಜಿಲ್ಲೆಯ ಖಾಸಗಿ ಬಸ್ ಮಾಲಕರು ಹೈಕೋರ್ಟ್‌ನಿಂದ ಈ ತಡೆಯಾಜ್ಞೆ ತಂದು ಜಿಲ್ಲೆಯಲ್ಲಿ ಜನಪ್ರಿಯಗೊಂಡಿರುವ ನರ್ಮ್ ಬಸ್‌ಗಳ ಸಂಚಾರಕ್ಕೆ ತಡೆಯೊಡ್ಡಿದ್ದು, ಇದರಿಂದ ಜನಸ್ನೇಹಿಯಾದ ಈ ಬಸ್‌ಗಳನ್ನೇ ನೆಚ್ಚಿಕೊಂಡಿದ್ದ ಸಾವಿರಾರು ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಹಿರಿಯನಾಗರಿಕರಿಗೆ ತೊಂದರೆಯೊಡಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಬಿಜೆಪಿ ಪಕ್ಷ, ಖಾಸಗಿ ಬಸ್ ಮಾಲಕರೊಂದಿಗೆ ಸೇರಿ ಈ ತಡೆಯಾಜ್ಞೆ ತಂದಿದ್ದು, ಈ ಪಕ್ಷ ಸದಾ ಖಾಸಗಿಯವರು ಹಾಗೂ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ನರ್ಮ್ ಬಸ್ ತಡೆ ತಂದಿರುವುದು ಇನ್ನೊಂದು ಉದಾಹರಣೆ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಅಮೃತ ಶೆಣೈ ಹೇಳಿದರು.

ಖಾಸಗಿ ಬಸ್‌ನವರ ದಬ್ಬಾಳಿಕೆ, ಅಹಂಕಾರದ ನಡೆಗಳಿಂದ ಬೇಸತ್ತ ಜಿಲ್ಲೆಯ ಜನತೆಯ ಬಹುಕಾಲದ ಬೇಡಿಕೆಯಂತೆ ಖಾಸಗಿ ಬಸ್ ಮಾಲಕರ ವಿರೋಧ ಹಾಗೂ ಆಮಿಷಗಳನ್ನು ಮೆಟ್ಟಿನಿಂತು ಸರಕಾರಿ ಬಸ್‌ಗಳನ್ನು ತರುವಲ್ಲಿ ಸಚಿವ ಪ್ರಮೋದ್ ಯಶಸ್ವಿಯಾಗಿದ್ದಾರೆ. ಶಾಸಕ-ಸಚಿವರಾದ ಬಳಿಕ ಅವರು ನಡೆಸುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಸಹಿಸಲು ಸಾಧ್ಯವಾಗದೇ ಬಿಜೆಪಿ ಖಾಸಗಿ ಬಸ್ ಮಾಲಕರ ಪರವಾಗಿ ನ್ಯಾಯಾಲಯದ ಮೆಟ್ಟಿಲೇರಿ ಇದೀಗ ನರ್ಮ್ ಬಸ್ ಸಂಚಾರಕ್ಕೆ ತಡೆಯೊಡ್ಡಿದೆ ಎಂದವರು ಆರೋಪಿಸಿದರು.

ಖಾಸಗಿ ಬಸ್‌ಗಳ ಮಾಲಕರು ಹಾಗೂ ಸಿಬ್ಬಂದಿಗಳ ವರ್ತನೆಯಿಂದ ಜಿಲ್ಲೆಯ ಜನ ಬೇಸತ್ತಿದ್ದರು. ಕಳೆದ ಅಕ್ಟೋಬರ್ ತಿಂಗಳಿನಿಂದ ನರ್ಮ್ ಬಸ್ ಓಡಾಟ ಆರಂಭಿಸಿದ ಬಳಿಕ ವಿದ್ಯಾರ್ಥಿಗಳು, ಮಹಿಳೆಯರು, ಅಂಗವಿಕಲರು, ಹಿರಿಯ ನಾಗರಿಕರು ಇದನ್ನು ಉತ್ಸಾಹದಿಂದ ಸ್ವಾಗತಿಸಿ ಬಳಸುತಿದ್ದಾರೆ. ಅತೀ ಕಡಿಮೆ ದರದಲ್ಲಿ ಉತ್ತಮ ಸೇವೆ ಅವರಿಗೆ ದೊರೆಯುತ್ತಿದೆ. ಅವರು ಸರಕಾರದ ಈ ಕಾರ್ಯವನ್ನು ಶ್ಲಾಘಿಸುತಿದ್ದಾರೆ ಎಂದರು.

 ಪ್ರತಿಭಟನೆಯಲ್ಲಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂದ್ಯಾ ತಿಲಕ್‌ರಾಜ್, ಯುವರಾಜ್, ಕಾಂಗ್ರೆಸ್ ನಾಯಕರಾದ ವೆರೋನಿಕಾ ಕರ್ನೇಲಿಯೊ, ಪ್ರಖ್ಯಾತ್ ಶೆಟ್ಟಿ, ರಮೇಶ್ ಕಾಂಚನ್, ರಮೇಶ್ ಪೂಜಾರಿ, ವಿಶ್ವಾಸ್ ಅಮೀನ್, ಪ್ರಶಾಂತ್ ಪೂಜಾರಿ, ಯತೀಶ್ ಕರ್ಕೇರಾ, ಜ್ಯೋತಿ ಹೆಬ್ಬಾರ್, ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಸೆಲಿನಾ ಕರ್ಕಡ, ಹಸನ್ ಅಜ್ಜರಕಾಡು, ಮೆಲ್ವಿನ್ ಡಿಸೋಜ, ಚಂದ್ರಿಕಾ ಶೆಟ್ಟಿ, ನರಸಿಂಹ ಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News