ಮಹಿಳೆಗೆ ಹಲ್ಲೆ ಮೂವರು ಎಎಪಿ ಶಾಸಕರ ವಿರುದ್ಧ ಪ್ರಕರಣ ದಾಖಲು
ಹೊಸದಿಲ್ಲಿ, ಜು. 6: ಜೂನ್ 28ರಂದು ನಡೆದ ದಿಲ್ಲಿ ವಿಧಾನ ಸಭೆ ಅಧಿವೇಶನದ ಸಂದರ್ಭ ತನ್ನ ಮೇಲೆ ಹಲ್ಲೆ ಮಾಡಲಾಗಿತ್ತು ಎಂದು ಮಹಿಳೆಯೋರ್ವರು ಆರೋಪಿಸಿದ ಬಳಿಕ ಆಮ್ ಆದ್ಮಿ ಪಕ್ಷದ ಮೂವರು ಶಾಸಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪ್ರವೇಶ ಪಾಸ್ ನೀಡದ ಹಿನ್ನೆಲೆಯಲ್ಲಿ ತಾನು ಮುಖ್ಯ ಕಟ್ಟಡದ ಹೊರಭಾಗದಲ್ಲಿ ನಿಂತಿದ್ದೆ. ಆಗ ಜರ್ನೈಲ್ ಸಿಂಗ್ ಹಾಗೂ ಅಮಾನಾತುಲ್ಲಾ ಖಾನ್ ಹೊರಗಡೆ ಬಂದರು. ಅವರು ನನ್ನನ್ನು ಒಂದು ಕೋಣೆಗೆ ಕರೆದೊಯ್ದು ಹಲ್ಲೆ ನಡೆಸಿದರು. ಅನಂತರ ಸೇರಿಕೊಂಡ ಸೋಮ್‌ನಾಥ್ ಭಾರತಿ ಕೂಡ ನನ್ನ ಮೇಲೆ ಹಲ್ಲೆ ಮಾಡಿದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಮಹಿಳೆಯ ದೂರಿನ ಆಧಾರದಲ್ಲಿ ಮೂವರ ವಿರುದ್ಧ ಸಿವಿಲ್ ಲೈನ್ಸ್ ಪೊಲೀಸ್ ಸ್ಟೇಶನ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ. ಜೂ. 18ರಂದು ನಡೆದ ಘಟನೆ ಕುರಿತು ಮಹಿಳೆ ಮೂವರು ಶಾಸಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ ಜತಿನ್ ನರ್ವಾಲ್ ತಿಳಿಸಿದ್ದಾರೆ. ದೂರು ನನ್ನ ಕಚೇರಿಗೆ ತಲುಪಿಲ್ಲ. ವಿಧಾನ ಸಭೆ ಆವರಣದಲ್ಲಿ ನಡೆದ ಘಟನೆ ಬಗ್ಗೆ ಪೊಲೀಸರು ಪ್ರಥಮ ಮಾಹಿತಿ ವರದಿ ದಾಖಲಿಸಿಲ್ಲ ಎಂದು ದಿಲ್ಲಿ ವಿಧಾನ ಸಭೆ ಸ್ಪೀಕರ್ ರಾಮ್ ನಿವಾಸ್ ಗೋಯಲ್ ತಿಳಿಸಿದ್ದಾರೆ.