ಮಂಗಳೂರು ರಸ್ತೆ ನಾಮಕರಣ ವಿವಾದ: ಬಂಟ ಸಂಘ ಆಕ್ರೋಶ
ಉಡುಪಿ, ಜು.6: ಬೇಡಿಕೆ ಸಲ್ಲಿಸದೇ ಮಂಗಳೂರಿನ ಲೈಟ್‌ಹೌಸ್ ಹಿಲ್ ರಸ್ತೆಗೆ ವಿಜಯಾ ಬ್ಯಾಂಕ್ ಸ್ಥಾಪಕ ಮೂಲ್ಕಿ ಸುಂದರರಾಮ್ ಶೆಟ್ಟಿ ಅವರ ಹೆಸರಿಡಲು ನಿರ್ಧರಿಸಿದ ಬಳಿಕ ಕೊನೆ ಕ್ಷಣದಲ್ಲಿ ರಾಜಕೀಯ ಒತ್ತಡಕ್ಕೆ ಮಣಿದು ನಿರ್ಧಾರ ಬದಲಿಸಿರುವುದರಿಂದ ದಿವ್ಯಚೇತನ ಸುಂದರ್‌ರಾಮ್ ಶೆಟ್ಟಿ ಅವರಿಗೆ ಹಾಗೂ ಬಂಟ ಸಮುದಾಯಕ್ಕೆ ಅವಮಾನವಾಗಿದೆ ಎಂದು ವಿಶ್ವ ಬಂಟರ ಯಾನೆ ನಾಡವರ ಜನಜಾಗೃತಿ ಬಳಗದ ಸಂಚಾಲಕ ಆರೂರು ತಿಮ್ಮಪ್ಪ ಶೆಟ್ಟಿ ಹೇಳಿದ್ದಾರೆ.
ಉಡುಪಿಯಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಂಟರ 110 ಸಂಘಟನೆಗಳಲ್ಲಿ ಯಾವೊಂದು ಸಂಘಟನೆಯ ಬೇಡಿಕೆಯೂ ಇಲ್ಲದೇ, ಮಂಗಳೂರು ಮಹಾನಗರ ಪಾಲಿಕೆ, ವಿಜಯಾಬ್ಯಾಂಕಿನ ಪ್ರಧಾನ ಕಚೇರಿ ಇರುವ ರಸ್ತೆಗೆ ಮುಲ್ಕಿ ಸುಂದರಾಮ್ ಶೆಟ್ಟಿ ಹೆಸರಿಡಲು ನಿರ್ಧರಿಸಿತ್ತು. ಜು.2ರಂದು ನಾಮಫಲಕದ ಅನಾವರಣದ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳ ಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ರಾಜಕಾರಣಿಗಳ ಹಸ್ತಕ್ಷೇಪದಿಂದ ಇದು ರದ್ದಾಯಿತು ಎಂದವರು ವಿವರಿಸಿದರು.
ಈ ವಿಚಾರದಲ್ಲಿ ಅನಗತ್ಯ ವಿಷಬೀಜಗಳನ್ನು ಬಿತ್ತಿ ಸಮಾಜದಲ್ಲಿ ಗೊಂದಲಗಳನ್ನು ನಿರ್ಮಿಸಲಾಗುತ್ತಿದೆ. ಸೈಂಟ್ ಅಲೋಸಿಯಸ್ ಕಾಲೇಜಿನ ವಿದ್ಯಾರ್ಥಿ ಗಳನ್ನು ಹಾಗೂ ಕ್ರೈಸ್ತ ಸಮುದಾಯವನ್ನು ಎತ್ತಿಕಟ್ಟಲಾಗುತ್ತಿದೆ. ಸಮಾಜಕ್ಕೆ ಅನನ್ಯ ಕೊಡುಗೆ ನೀಡಿದ ಮಾನವೀಯ ಮೌಲ್ಯ, ಜಾತ್ಯತೀತ ನಿಲುವನ್ನು ಎತ್ತಿಹಿಡಿದ ಮಹಾನ್ ಚೇತನಕ್ಕೆ ಅವಮಾನ ಮಾಡಲಾಗಿದೆ ಎಂದು ತಿಮ್ಮಪ್ಪ ಶೆಟ್ಟಿ ನುಡಿದರು.
ಈ ವಿವಾದಕ್ಕೆ ಮಂಗಳೂರಿನ ಇಬ್ಬರು ಶಾಸಕರಾದ ಜೆ.ಆರ್.ಲೋಬೊ ಹಾಗೂ ಐವಾನ್ ಡಿಸೋಜಾ ಅವರೇ ನೇರ ಕಾರಣ ಎಂದು ಮತ್ತೊಬ್ಬ ಸಂಚಾಲಕ ಬೆಳ್ವೆ ವಸಂತಕುಮಾರ್ ಶೆಟ್ಟಿ ಆರೋಪಿಸಿದರು. ರಸ್ತೆಗೆ ಸುಂದರಾಮ್ ಶೆಟ್ಟಿ ಅವರ ಹೆಸರನ್ನೇ ಇಡಬೇಕು. ಈ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜು.8ರಂದು ಕರೆದ ಸಭೆಯಲ್ಲಿ ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗುರಿಮುಟ್ಟುವ ತನಕವೂ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದವರು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಭಾಸ್ಕರ ರೈ, ಸಂಚಾಲಕರಾದ ಎಂ.ಚಂದ್ರಶೇಖರ ಹೆಗ್ಡೆ ಹಾಗೂ ಕಾನೂನು ಸಲಹೆಗಾರ ಕೃಷ್ಣರಾಜ್ ಶೆಟ್ಟಿ ಚೋರಾಡಿ ಉಪಸ್ಥಿತರಿದ್ದರು.