ಬಿ.ಸಿ.ರೋಡಿನಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆಗೆ ಯತ್ನ: ಸಂಸದ, ಶಾಸಕರ ಸಹಿತ ಹಲವರ ಬಂಧನ

Update: 2017-07-07 07:08 GMT

ಬಂಟ್ವಾಳ, ಜು.7: ಶರತ್ ಮೇಲಿನ ಹಲ್ಲೆಯನ್ನು ಖಂಡಿಸಿ ಬಿ.ಸಿ.ರೋಡಿನಲ್ಲಿ ಇಂದು ಬೆಳಗ್ಗೆ ಪ್ರತಿಭಟನೆ ನಡೆಸಲು ಮುಂದಾದ ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಶಾಸಕ ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಸೇರಿದಂತೆ ಸಂಘ ಪರಿವಾರದ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಹಿಂದೂ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಇಂದು ಪ್ರತಿಭಟನೆಗೆ ಕರೆ ನೀಡಿದ್ದರಿಂದ ಬಿ.ಸಿ.ರೋಡಿನಲ್ಲಿ ಬೆಳಗ್ಗೆಯೇ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪ್ರತಿಭಟನೆಗಾಗಿ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಜಮಾಯಿಸುತ್ತಿದ್ದಂತೆ ಸ್ಥಳದಲ್ಲಿದ್ದ ಸಾವಿರಕ್ಕೂ ಅಧಿಕ ಪೊಲೀಸರು ಅವರನ್ನು ಸುತ್ತುವರಿದರು. ಸಂಸದ ನಳಿನ್ ಕುಮಾರ್ ಸೇರಿದಂತೆ ಪ್ರತಿಭಟನೆಯ ಮುಂದಾಳುತ್ವ ವಹಿಸಿದ್ದ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಕಲ್ಲಡ್ಕ ಪ್ರಭಾಕರ ಭಟ್ ಸೇರಿದಂತೆ ಹಲವು ಸಂಘ ಪರಿವಾರದ ಮುಖಂಡರು ಭಾಗಿಯಾಗಿದ್ದರು.
ಸದ್ಯ ಪರಿಸ್ಥಿತಿ ಪೊಲೀಸ ನಿಯಂತ್ರಣದಲ್ಲಿದ್ದು, ಪ್ರತಿಭಟನಾ ಸ್ಥಳಕ್ಕೆ ಐಜಿಪಿ ಹರಿಶೇಖರನ್ ಆಗಮಿಸಿದ್ದು, ಪರಿಸ್ಥಿತಿಯ ಅವಲೋಕನ ನಡೆಸಿದರು.

ವಾಹನ ಸಂಚಾರಕ್ಕೆ ತಡೆ
 ಈ ನಡುವೆಯ ಬಿ.ಸಿ.ರೋಡ್ ರಸ್ತೆಯಾಗಿ ವಾಹನ ಸಂಚಾರವನ್ನು ಪೊಲೀಸರು ತಡೆ ಹಿಡಿದಿದ್ದಾರೆ. ಮಂಗಳೂರಿನಿಂದ ಬಿ.ಸಿ.ರೋಡ್‌ನತ್ತ ತೆರಳುವ ವಾಹನಗಳನ್ನು ಫರಂಗಿಪೇಟೆಯಲ್ಲಿ ತಡೆ ಹಿಡಿಯಲಾಗಿದೆ. ಅದೇರೀತಿ ಕಲ್ಲಡ್ಕ ಕಡೆಯಿಂದ ಬರುವ ವಾಹನಗಳನ್ನು ಮೆಲ್ಕಾರ್‌ನಲ್ಲಿ ಪೊಲೀಸರು ತಡೆಹಿಡಿದಿದ್ದಾರೆ. ಈ ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ ಪರ್ಯಾಯ ರಸ್ತೆಯ ಮೂಲಕ ಸಂಚರಿಸುವಂತೆ ಪೊಲೀಸರು ನಿರ್ದೇಶಿಸುತ್ತಿದ್ದಾರೆ.
ಪೊಲೀಸರ ಈ ಕ್ರಮದಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿದೆ. ವಾಹನಗಳ ಭಾರೀ ಸಾಲುಗಳು ಹೆದ್ದಾರಿಯಲ್ಲಿ ಕಂಡುಬರುತ್ತಿದ್ದು, ಸಾರ್ವಜನಿಕರು ತೀವ್ರ ತೊಂದರೆಗೆ ಸಿಲುಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News