ಶವಯಾತ್ರೆಯ ಹೆಸರಿನಲ್ಲಿ ದಾಂಧಲೆ ನಡೆಸಿದ ಸಂಘಪರಿವಾರ: ಎಸ್.ಡಿ.ಪಿ.ಐ
ಮಂಗಳೂರು, ಜು.8: ಜುಲೈ 4 ರಂದು ಅಪರಿಚಿತರಿಂದ ದಾಳಿಗೊಳಗಾದ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ನಿನ್ನೆ ಸಂಜೆ ಮೃತ ಪಟ್ಟಿದ್ದು, ಇಂದು ಸಂಘಪರಿವಾರ ಮಂಗಳೂರಿನಿಂದ ಶವಯಾತ್ರೆಯನ್ನು ನಡೆಸಿ ಬಿ.ಸಿ.ರೋಡ್ ತಲುಪುತ್ತಿದ್ದಂತೆಯೇ ಪಾರ್ಥಿವ ಶರೀರವನ್ನು ಬಿ.ಸಿ ರೋಡ್ ಜಂಕ್ಷನ್‌ನಲ್ಲಿಟ್ಟು ಅಂತಿಮ ದರ್ಶನಕ್ಕೆ ಅವಕಾಶ ಕೊಡಬೇಕೆಂದು ಸಂಘಪರಿವಾರದ ನಾಯಕರು ಪೊಲೀಸರೊಂದಿಗೆ ಪಟ್ಟು ಹಿಡಿದಾಗ ಪೊಲೀಸ್ ಇಲಾಖೆ ಅವಕಾಶ ನಿರಾಕರಿಸಿತು.
ಆ ಸಂದರ್ಭದಲ್ಲಿ ಸಂಘಪರಿವಾರದ ಕಾರ್ಯಕರ್ತರು ಏಕಾಏಕಿ ಮುಸಲ್ಮಾನರ ಅಂಗಡಿ ಮುಗ್ಗಟ್ಟುಗಳಿಗೆ ಮತ್ತು ವಾಹನಗಳಿಗೆ ಕಲ್ಲು ತೂರಾಟ ನಡೆಸಿರುತ್ತಾರೆ. ಅದಲ್ಲದೆ ಬಸ್ಸಿನಲ್ಲಿ ಸಂಚರಿಸುತ್ತಿದ್ದ ಅಮಾಯಕ ಮುಸ್ಲಿಮ್ ಯುವಕರ ಮೇಲೆ ದೈಹಿಕ ಹಲ್ಲೆ ನಡೆಸಿ, ಸಾರ್ವಜನಿಕರ ಸೊತ್ತುಗಳನ್ನು ನಾಶಪಡಿಸಿದ್ದಾರೆ. ಜಿಲ್ಲೆಯಲ್ಲಿ 144 ನಿಷೇದಾಜ್ಞೆ ಜಾರಿಯಲ್ಲಿರುವಾಗ ಶವಯಾತ್ರೆಗೆ ಅನುವು ಮಾಡಿಕೊಟ್ಟದ್ದೇ ಬಿ.ಸಿ ರೋಡಿನಲ್ಲಿ ದಾಂಧಲೆ ನಡೆಯಲು ಕಾರಣ. ಪೊಲೀಸ್ ಇಲಾಖೆಯ ವೈಫಲ್ಯತೆ ಮತ್ತು ಜಿಲ್ಲಾಡಳಿತದ ನಿಷ್ಕ್ರೀಯತೆ ಇಲ್ಲಿ ಎದ್ದು ಕಾಣುತ್ತದೆ. ಯಾಕೆಂದರೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಇರುವಾಗಲೇ ನಿನ್ನೆ ಜುಲೈ 7ರಂದು ಸಂಘಪರಿವಾರದ ಪ್ರತಿಭಟನೆಗೆ ಪೊಲೀಸ್ ಇಲಾಖೆ ಅವಕಾಶ ಕೊಟ್ಟಿತ್ತು.
ಈ ಹಿಂದೆಯೂ ಜಿಲ್ಲೆಯಲ್ಲಿ ಸಂಘಪರಿವಾರ ನಡೆಸಿದ ಶವಯಾತ್ರೆಯ ವೇಳೆ ಈರ್ವರ ಪ್ರಾಣಹಾನಿಯಾದದ್ದನ್ನು ಇಲ್ಲಿ ಸ್ಮರಿಸಿಬಹುದು. ಮಂಗಳೂರಿನಿಂದ ಆರಂಭಗೊಂಡ ಶವಯಾತ್ರೆಯ ಮಧ್ಯೆ ಹೆದ್ದಾರಿಯ ಬದಿಯಿಂದ ಕಲ್ಲನ್ನೆತ್ತಿ ಕಾರಲ್ಲಿ ತುಂಬಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಂದರೆ ಬಿ.ಸಿ ರೋಡಿನಲ್ಲಿ ಈ ರೀತಿ ಕಲ್ಲು ತೂರಾಟ ಮಾಡುವ ದುರುದ್ದೇಶವನ್ನು ಈ ಮಂದಿ ಹೊಂದಿದ್ದರು ಎಂಬುವುದು ವ್ಯಕ್ತವಾಗುತ್ತದೆ. ಅಂತಯೇ ಮಿತ್ತಬೈಲು ಮಸೀದಿಯ ಮೇಲೆ ಕಲ್ಲು ಮತ್ತು ಚಪ್ಪಲಿಗಳನ್ನು ಎಸೆದಿದ್ದಾರೆ. ಆದರೆ ಇದೀಗ ಮುಸ್ಲಿಮರು ಶವಯಾತ್ರೆಯ ಮೇಲೆ ಕಲ್ಲುತೂರಾಟ ನಡೆಸಿರುತ್ತಾರೆಂದು ಅಪಪ್ರಚಾರವನ್ನು ಮಾಡಿ ಮುಸಲ್ಮಾನರ ಮೇಲೆ ಎತ್ತಿ ಕಟ್ಟಲು ಪ್ರಯತ್ನಿಸುತ್ತಿದ್ದಾರೆ. ಅದಲ್ಲದೆ ಬಿ.ಸಿ ರೋಡಿನ ಕೈಕಂಬದಲ್ಲಿ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಅಮಾಯಕ ಮುಸ್ಲಿಮ್ ಯುವಕರನ್ನು ಪೊಲೀಸರು ಬಂಧಿಸಿರುವುದು ಖಂಡನಾರ್ಹವಾಗಿದೆ. ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಎಸ್.ಡಿ.ಪಿ.ಐ ಒತ್ತಾಯಿಸುತ್ತದೆ.
ಆದುದರಿಂದ ಸರಕಾರ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕೂಡಲೇ ಕಾರ್ಯಪ್ರವೃತ್ತರಾಗಿ ಕಲ್ಲೂ ತೂರಾಟ, ಹಲ್ಲೆ, ಸೊತ್ತುಗಳ ಹಾನಿ ನಡೆಸಿ ದಾಂಧಲೆಗೈದ ಸಂಘಪರಿವಾರದ ದುಷ್ಕರ್ಮಿಗಳನ್ನು ಬಂಧಿಸಿ, ಅವರ ಮೇಲೆ ಕಠಿಣ ಕಾನೂನುಕ್ರಮ ಜರುಗಿಸಬೇಕೆಂದು ಎಸ್.ಡಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.