×
Ad

ಮುರಲಿ ಮೋಹನ ಚೂಂತಾರ್‌ರ ‘ಸಂಜೀವಿನಿ -2’ ಕೃತಿ ಬಿಡುಗಡೆ

Update: 2017-07-08 17:40 IST

ಮಂಗಳೂರು, ಜು.8: ವೈದ್ಯ ಸಾಹಿತ್ಯ ಲೋಕದಲ್ಲಿ ಅಪಾರ ಸಾಧನೆಗೈದಿರುವ ಡಾ.ಮುರಲಿ ಮೋಹನ ಚೂಂತಾರುರವರ ಬರಹಗಳು ಮಹತ್ವಪೂರ್ಣವಾದುದು. ವೈದ್ಯಕೀಯ ವೃತ್ತಿಯ ಬಿಡುವಿಲ್ಲದ ನಡುವೆಯೂ ಸಾಹಿತ್ಯ ಕೃತಿಗಳನ್ನು, ಅಂಕಣಗಳನ್ನು ಬರೆಯುವ ಚೂಂತಾರು ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಛಾಪನ್ನು ಮೆರೆದಿದ್ದಾರೆ. ಇವರ ಪ್ರತಿಯೊಂದು ಲೇಖನಗಳು ಆರೋಗ್ಯಪೂರ್ಣವಾದುದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಆಶ್ರಯದಲ್ಲಿ ನಗರದ ಖಾಸಗಿ ಸಭಾಂಗಣದಲ್ಲಿ ಜರಗಿದ ಸುರಕ್ಷಾ ದಂತ ಚಿಕಿತ್ಸಾಲಯ ಹೊಸಂಗಡಿ ಇದರ ವಿಂಶತಿ ಸಂಭ್ರಮ ಆಚರಣೆ ಸಂದರ್ಭ ಡಾ.ಮುರಲಿ ಮೋಹನ ಚೂಂತಾರುರವರ ನೂತನ ಕೃತಿ ‘ಸಂಜೀವಿನಿ -2’ನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ವೈದ್ಯಕೀಯ ವಿಷಯಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಬರೆಯುವ ಕಲೆ ಡಾ.ಮುರಲಿಯವರಿಗೆ ಸಿದ್ದಿಸಿದೆ. ಅವರು ಬರೆದ ಆರೂ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸುವ ಅವಕಾಶ ನನಗೆ ದೊರಕಿದೆ. ಅವರ ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಸೇವಾ ಮನೋಭಾವ ಮೆಚ್ಚತಕ್ಕದ್ದು. ಸಾರ್ವಜನಿಕ ಬದುಕಿನಲ್ಲಿ ಲಕ್ಷಾಂತರ ಮಂದಿ ಸಹಕಾರ ಪಡೆದುಕೊಳ್ಳುತ್ತಾರೆ. ಆದರೆ ಅದನ್ನು ನೆನಪಿಟ್ಟುಕೊಳ್ಳುವ ಮಂದಿ ಬಹಳ ಕಡಿಮೆ. ಆದರೆ ಡಾ. ಚೂಂತಾರು ಇದಕ್ಕೆ ಅಪವಾದ. ಸಹಾಯ ಮಾಡಿದ 25 ವರ್ಷಗಳ ಬಳಿಕವೂ ಎಲ್ಲವನ್ನೂ ನೆನಪಿಟ್ಟುಕೊಂಡಿರುವುದು ಅವರ ಹೃದಯ ವೈಶಾಲ್ಯಕ್ಕೆ ಸಾಕ್ಷಿ ಎಂದು ರಮಾನಾಥ ರೈ ನುಡಿದರು.

ಸಾಹಿತಿ, ವೈದ್ಯ ಡಾ.ರಮಾನಂದ ಬನಾರಿ ಮಾತನಾಡಿ ‘‘ಸಂಜೀವಿನಿ’’ ಕೃತಿ, ವೈದ್ಯ ಲೋಕದ ಅಪರೂಪದ ಕೃತಿಯಾಗಿದ್ದು, ಜನ ಸಾಮಾನ್ಯರಲ್ಲಿ ಆರೋಗ್ಯದ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವಲ್ಲಿ ಅತೀ ನಿರ್ಣಯಕ ಪಾತ್ರ ವಹಿಸಬಲ್ಲುದು ಎಂದರು. ಕಾಸರಗೋಡು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ರಾಜಶ್ರೀ ಮೋಹನ್, ಹಾಸ್ಯ ಸಾಹಿತಿ ಭುವನೇಶ್ವರಿ ಹೆಗ್ಗಡೆ, ವೈದ್ಯ ಸಾಹಿತಿ ಡಾ. ಮೀರಾ, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಉಪಸ್ಥಿತರಿದ್ದರು.

ಡಾ.ಮುರಲಿ ಮೋಹನ್ ಚೂಂತಾರು ಸ್ವಾಗತಿಸಿದರು. ರಾಮಕೃಷ್ಣ ಭಟ್ ಚೊಕ್ಕಾಡಿ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಚೂಂತಾರು ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News