‘ಸರಕಾರಿ ಬಸ್ ಪರವಾನಿಗೆ ರದ್ದು: ತೀರ್ಪಿನ ವಿರುದ್ಧ ಮೇಲ್ಮನವಿ; ಸಚಿವ ಪ್ರಮೋದ್ ಮಧ್ವರಾಜ್
ಉಡುಪಿ, ಜು.8: ಉಡುಪಿ ಜಿಲ್ಲೆಯಲ್ಲಿ 55 ಸರಕಾರಿ ಬಸ್‌ಗಳ ಪರವಾನಿಗೆ ಯನ್ನು ರದ್ದುಗೊಳಿಸಿರುವ ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪಿನ ವಿರುದ್ಧ ರಾಜ್ಯ ಸರಕಾರವು ನ್ಯಾಯವಾದಿ ಹಾರ್ನಳ್ಳಿ ಅಶೋಕ್ ಮೂಲಕ ತ್ರಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಿದ್ದು, ಆದಷ್ಟು ಶೀಘ್ರದಲ್ಲಿ ಈ ತೀರ್ಪಿಗೆ ತಡೆಯಾಜ್ಞೆ ತರುವ ಕೆಲಸವನ್ನು ಸರಕಾರ ಮಾಡಲಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ಮಧ್ಯೆ ಕೆಎಸ್‌ಆರ್‌ಟಿಸಿ ಈ ಬಸ್‌ಗಳಿಗೆ ತಾತ್ಕಾಲಿಕ ಪರವಾನಿಗೆ ಪಡೆಯಲು ಉಡುಪಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ. ತಾತ್ಕಾಲಿಕ ಪರವಾನಿಗೆ ಸಿಕ್ಕಿದರೆ ನಾಲ್ಕು ತಿಂಗಳು ಬಸ್ ಓಡಿಸಲು ಯಾವುದೇ ಸಮಸ್ಯೆ ಆಗುವುದಿಲ್ಲ. ತಾತ್ಕಾಲಿಕ ಪರವಾನಿಗೆ ದೊರೆಯಲು ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದರು.
ಹಿಂದಿನ ಜಿಲ್ಲಾಧಿಕಾರಿ ಡಾ. ವಿಶಾಲ್ ಇರುವಾಗ 30 ನರ್ಮ್ ಬಸ್‌ಗಳಿಗೆ ಪರವಾನಿಗೆ ನೀಡಿದ್ದು, ಅದರಲ್ಲಿ 12 ಬಸ್‌ಗಳು ನಗರದಲ್ಲಿ ಓಡುತ್ತಿವೆ. ಆ 30 ಪರವಾನಿಗೆಗೆ ಯಾವುದೇ ಆತಂಕ ಇಲ್ಲ ಎಂದ ಅವರು, ಈ ವಿಚಾರದಲ್ಲಿ ಕೇವಿಯೆಟ್ ಹಾಕಲು ಆಗುವುದಿಲ್ಲ. ಕೇವಿಯೆಟ್ ಹಾಕುವುದು ವ್ಯಕ್ತಿಯ ಮೇಲೆ ಹೊರತು ಸಾರ್ವಜನಿಕವಾಗಿ ಅಲ್ಲ. ಇಲ್ಲಿ ಸಾಕಷ್ಟು ಮಂದಿ ಬಸ್ ಮಾಲಕರು ಇರುವಾಗ ಕೇವಲ ಒಬ್ಬರ ಮೇಲೆ ಕೇವಿಯಟ್ ಹಾಕಲು ಆಗುವುದಿಲ್ಲ ಎಂದು ತಿಳಿಸಿದರು.
ಸಿಆರ್‌ಝೆಡ್ ಮರಳುಗಾರಿಕೆಗೆ ಪರವಾನಿಗೆ
ಸಿಆರ್‌ಝೆಡ್ ವ್ಯಾಪ್ತಿಯ ಮರಳುಗಾರಿಕೆಗೆ ಸಂಬಂಧಿಸಿ ಹಸಿರು ಪೀಠವು ಹಿಂದಿನ ಎಲ್ಲ ಪರವಾನಿಗೆಯನ್ನು ರದ್ದು ಪಡಿಸಿ, ಹೊಸದಾಗಿ ಪರವಾನಿಗೆ ನೀಡುವಂತೆ ಆದೇಶ ನೀಡಿದೆ. ಅದರಂತೆ ನಾವು ಮುಂದೆ ಯಾವುದೇ ಸಮಸ್ಯೆ ಯಾಗದಂತೆ ಪರಿಸರ ಮತ್ತು ಅರಣ್ಯ ಸಚಿವಾಲಯ ನಿರ್ದೇಶನವನ್ನು ಚಾಚು ತಪ್ಪದೆ ಪಾಲನೆ ಮಾಡಿ ಕಾನೂನು ಪ್ರಕಾರ ಪರವಾನಿಗೆ ನೀಡುತ್ತೇವೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಸಮುದ್ರದಲ್ಲಿ ಮೀನು ಮರಿ ಇಡುವ ಸಮಯ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಅವಕಾಶ ಇಲ್ಲ. ಜು.1ರಿಂದ ಆ.1ರವರೆಗೆ ಮೀನುಗಾರಿಕಾ ನಿಷೇಧ ಇರುವುದರಿಂದ ಆ.1ರಿಂದ ಹೊಸ ಪರವಾನಿಗೆಯನ್ನು ಕಾನೂನು ಪ್ರಕಾರ ನೀಡಿ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮರಳು ತೆಗೆಯಲು ಅವಕಾಶ ಮಾಡಿಕೊಡಲಾಗುತ್ತದೆ ಎಂದರು.
ಉಡುಪಿ ಜಿಲ್ಲೆಯ ಸಿಆರ್‌ಝೆಡ್ ವ್ಯಾಪ್ತಿಯ ಒಂದು ಕೆ.ಜಿ. ಮರಳು ಕೂಡ ಹೊರ ಜಿಲ್ಲೆಗೆ ಹೋಗಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಈ ಕುರಿತು ನಿಯಮ ಮಾಡಲಾಗುವುದು. ಜಿಲ್ಲೆಯ ಜನತೆಗೆ ಮರಳಿನ ಸಮಸ್ಯೆ ಉಂಟಾಗಿರುವುದು ಇಲ್ಲಿನ ಮರಳು ದುಬಾರಿ ದರಕ್ಕೆ ಹೊರ ಜಿಲ್ಲೆಗೆ ಸಾಗಾಟ ಆಗುತ್ತಿರುವ ಪರಿಣಾಮ. ಆ.1ರಿಂದ ಜಿಲ್ಲೆಯ ಜನತೆಗೆ ಧಾರಾಳವಾಗಿ, ಅತಿ ಕಡಿಮೆ ದರದಲ್ಲಿ ಮರಳು ಸಿಗುವ ವ್ಯವಸ್ಥೆಗೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ನಾನ್ ಸಿಆರ್‌ಝೆಡ್ ಮರಳುಗಾರಿಕೆ ವಿಚಾರ ಇನ್ನು ಸಚಿವ ಸಂಪುಟ ಉಪ ಸಮಿತಿಯಲ್ಲಿದೆ. ಈ ಕುರಿತು ಅಧಿಕಾರಿಗಳು ಹಾಗೂ ರಾಜಕಾರಣಿಗಳ ಮಧ್ಯೆ ಭಿನ್ನಾಭಿಪ್ರಾಯಗಳಿವೆ. ಈ ಮೂರು ಜಿಲ್ಲೆಯ ಹಿತದೃಷ್ಠಿಯಿಂದ ಪ್ರತ್ಯೇಕ ಮರಳು ನೀತಿ ಮಾಡಬೇಕೆಂಬುದು ಜನಪ್ರತಿನಿಧಿಗಳ ಬೇಡಿಕೆಯಾದರೆ, ಒಂದು ರಾಜ್ಯಕ್ಕೆ ಎರಡು ನೀತಿ ಮಾಡಲು ಆಗುವುದಿಲ್ಲ ಎಂಬುದು ಅಧಿಕಾರಿಗಳ ವಾದ. ಈ ರೀತಿಯ ಗೊಂದಲದಿಂದ ವಿಳಂಬವಾಗುತ್ತಿದೆ. ಆದುದರಿಂದ ಈ ವಿಚಾರ ಸಚಿವ ಸಂಪುಟಕ್ಕೆ ತರುವ ಮೊದಲು ಭಿನ್ನಾಭಿಪ್ರಾಯಗಳನ್ನು ಸರಿಪಡಿಸಬೇಕಾಗಿದೆ. ಇದು ಮುಖ್ಯಮಂತ್ರಿ ಗಮನದಲ್ಲಿದ್ದು, ಪದೇ ಪದೇ ಅವರ ಗಮನಕ್ಕೆ ತರಲಾಗುತ್ತಿದೆ ಎಂದು ಸಚಿವರು ಹೇಳಿದರು.
ಕಾನೂನು ಉಲ್ಲಂಘಿಸುವ ಖಾಸಗಿ ಬಸ್‌ಗಳಿಗೆ ದಂಡ
ಜಿಲ್ಲೆಯ ಖಾಸಗಿ ಬಸ್‌ಗಳು ಮಾಡುತ್ತಿರುವ ಕಾನೂನು ಉಲ್ಲಂಘನೆಗಳನ್ನು ಪಟ್ಟಿ ಮಾಡಿ ಅದರ ವಿರುದ್ಧ ದಂಡ ವಿಧಿಸುವ ಕೆಲಸ ಒಂದು ತಿಂಗಳ ಕಾಲ ಮಾಡುವಂತೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಆರ್‌ಟಿಓಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.
ಖಾಸಗಿ ಬಸ್ ಮಾಲಕರು ಜನರ ಪರವಾಗಿ ಇರದೆ, ಕೋರ್ಟಿಗೆ ಹೋಗಿ ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಇಂತಹ ಖಾಸಗಿ ಬಸ್‌ಗಳ ಬಗ್ಗೆ ಯಾವುದೇ ಮುಲಾಜು ಅಥವಾ ಅನುಕಂಪ ನಮಗೆ ಯಾಕೆ ಇರಬೇಕು ಎಂದು ಪ್ರಶ್ನಿಸಿದ ಅವರು, ಬಸ್ ಮಾಲಕರು ಯಾವುದೇ ಪಕ್ಷದವರಾಗಿದ್ದರೂ ನಾವು ಚಿಂತೆ ಮಾಡಲ್ಲ. ಖಾಸಗಿ ಲಾಬಿಗೆ ನಾವು ಮಣಿಯಲ್ಲ. ನಮಗೆ ಜನರ ಹಿತ ಮುಖ್ಯ ಎಂದರು.