×
Ad

ಜಿಲ್ಲಾಸ್ಪತ್ರೆಯಲ್ಲಿ ಹಿರಿಯ ನಾಗರಿಕರ ಐಸಿಯು ಉದ್ಘಾಟನೆ

Update: 2017-07-08 18:26 IST

ಉಡುಪಿ, ಜು.8: ಹಿರಿಯ ನಾಗರಿಕರಿಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ಆರಂಭಿಸಲಾದ ನಾಲ್ಕು ಬೆಡ್‌ಗಳ ಐಸಿಯು ಮತ್ತು ಅಂಧತ್ವ ನಿವಾರಣಾ ಯೋಜನೆಯಡಿ ಮಂಜೂರಾದ 19 ಲಕ್ಷ ರೂ. ವೆಚ್ಚದ ಸಂಚಾರಿ ನೇತ್ರ ಚಿಕಿತ್ಸಾ ವಾಹನವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಶನಿವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಸಚಿವರು, ಜಿಲ್ಲಾಸ್ಪತ್ರೆಗೆ ಹೆಚ್ಚಿನ ಸಂಖ್ಯೆಯ ಹಿರಿಯ ನಾಗರಿಕರು ಚಿಕಿತ್ಸೆಗಾಗಿ ಬರುತ್ತಿದ್ದು, ಅವರ ಅನುಕೂಲಕ್ಕಾಗಿ ಈ ಐಸಿಯುವನ್ನು ಆರಂಭಿಸಲಾಗಿದೆ. 2015-16ನೆ ಸಾಲಿನಲ್ಲಿ ಉಡುಪಿ ಜಿಪಂಗೆ ನೀಡಲಾದ ರಾಷ್ಟ್ರೀಯ ವಯೋ ಸಮ್ಮಾನ್ ಪ್ರಶಸ್ತಿ ಮೊತ್ತದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ತಲಾ 12 ಲಕ್ಷ ರೂ. ಮೊತ್ತದ 4 ವೆಂಟಿಲೇಟರ್‌ಗಳನ್ನು ಆರೋಗ್ಯ ಇಲಾಖೆಯಿಂದ ಅಳವಡಿಸಲಾಗಿದೆ ಎಂದು ತಿಳಿಸಿದರು.

ಉಡುಪಿ ಜಿಲ್ಲೆ ರಚನೆಯಾದ 19ವರ್ಷಗಳ ನಂತರ ಅಜ್ಜರಕಾರು ಸರಕಾರಿ ಆಸ್ಪತ್ರೆಯು ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿದೆ. ಇದರಿಂದಾಗಿ ಆಸ್ಪತ್ರೆಯಲ್ಲಿ ಒಟ್ಟು 27 ವೈದ್ಯರ ಹುದ್ದೆಗಳಿದ್ದು, ಇವುಗಳ ಪೈಕಿ 24 ಹುದ್ದೆಗೆ ವೈದ್ಯರನ್ನು ನೇಮಕ ಮಾಡಲಾಗಿದೆ. ಇನ್ನು ಕೇವಲ ಮೂರು ಹುದ್ದೆ ಗಳು ಖಾಲಿ ಇವೆ. ಅದೇ ರೀತಿ ಒಟ್ಟು 28ನರ್ಸ್‌ಗಳನ್ನು ನೇಮಕ ಮಾಡಲಾಗಿದೆ. ಇನ್ನು ಮುಂದೆ ರೋಗಿಗಳು ಧೈರ್ಯವಾಗಿ ಜಿಲ್ಲಾಸ್ಪತ್ರೆಯಲ್ಲಿ ಸೇವೆಯನ್ನು ಪಡೆದು ಕೊಳ್ಳ ಬಹುದಾಗಿದೆ. ಒಳ್ಳೆಯ ಚಿಕಿತ್ಸೆ ಸಿಗಲ್ಲ ಎಂಬ ಭಯ, ಆತಂಕ ಪಡುವ ಅಗತ್ಯ ವಿಲ್ಲ ಎಂದವರು ಹೇಳಿದರು.

ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಲ್ಲಾ ಸರ್ಜನ್ ಡಾ.ಮಧುಸೂಧನ ನಾಯಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ, ಸಂಚಾರಿ ನೇತ್ರ ಚಿಕಿತ್ಸಾ ಘಟಕದ ವೈದ್ಯಾಧಿಕಾರಿ ಡಾ.ನಿತ್ಯಾನಂದ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News