ಗೋರಕ್ಷಣೆಯ ಹೆಸರಿನಲ್ಲಿ ಸಮಾಜದಲ್ಲಿ ಆತಂಕ ಸೃಷ್ಟಿಸುತ್ತಿರುವುದು ಖಂಡನೀಯ: ನ್ಯಾ.ಸಂತೋಷ್ ಹೆಗ್ಡೆ
ಭಟ್ಕಳ, ಜು.8: ದೇಶದ್ಯಾಂತ ಗೋರಕ್ಷಣೆಯ ಹೆಸರಲ್ಲಿ ಅಮಾಯಕರ ಹತ್ಯೆ ನಡೆಯುತ್ತಿದ್ದು, ಇದು ಖಂಡನೀಯ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಾಮೂರ್ತಿ ಸಂತೋಷ್ ಹೆಗಡೆ ಅಭಿಪ್ರಾಯಪಟ್ಟರು.
ಅವರು ಶನಿವಾರ ಇಲ್ಲಿನ ನಾಗಯಕ್ಷೆ ಸಭಾಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ನಂತರ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಗೋರಕ್ಷಣೆಯ ಹೆಸರಲ್ಲಿ ನಡೆಯುವ ಎಲ್ಲ ರೀತಿಯ ಅಮಾನುಷ ಕೃತ್ಯಗಳು ಖಂಡನೀಯ ಎಂದ ಅವರು, ಸರ್ಕಾರ ಇದಕ್ಕಾಗಿ ಸೂಕ್ತ ಕ್ರಮ ಜರಗಿಸಬೇಕು ಎಂದರು. ಯಾವುದೇ ರೀತಿಯ ಭಯೋತ್ಪದನೆಗೆ ಸರ್ಕಾರ ಆಸ್ಪದೆ ನೀಡಕೂಡದು ಎಂದರು.
ಭಯೋತ್ಪಾದನೆ ಮತ್ತಿತರ ಆರೋಪದಡಿ ಯುವಕರು ಬಂಧಿಸಲ್ಪಟ್ಟು ನಂತರ ನಿರಪರಾಧಿಯಾಗಿ ಬಿಡುಗಡೆಗೊಳ್ಳುತ್ತಾರೆ. 8-10 ವರ್ಷ ಅವರು ಜೈಲಿನಲ್ಲಿ ಜೀವನ ಕಳೆಯುತ್ತಾರೆ. ಇದಕ್ಕೆ ಯಾರು ಹೊಣೆ ಎಂದು ಕೇಳಿದ ಪ್ರಶ್ನೆಗೆ, ಜಾಮಿನಿನ ಮೇಲೆ ಬಿಡುಗಡೆಯಾದವರೆಲ್ಲರೂ ನಿರಪರಾಧಿಗಳು ಎನ್ನುವ ಭಾವನೆ ಸರಿಯಲ್ಲ. ಆದರೆ ನಮ್ಮ ದೇಶದಲ್ಲಿ ಕೇವಲ ಶೇ.5 ರಷ್ಟು ಅಪರಾಧಿಗಳು ಮಾತ್ರ ಶಿಕ್ಷೆ ಅನುಭವಹಿಸುತ್ತಾರೆ. ಉಳಿದ ಶೇ.95 ಅಪರಾಧಿಗಳು ಸಾಕ್ಷಾಧಾರಗಳ ಕೊರತೆಯಿಂದಾಗಿ ಹೊರಬರುತ್ತಾರೆ. ನಮ್ಮ ಪೊಲೀಸ್ ಇಲಾಖೆಯಲ್ಲಿ ವೃತ್ತಿಪರತೆ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ. ನಿರಪರಾಧಿಗಳಿಗೆ ಶಿಕ್ಷೆಯಾಗಕೂಡದು ಎನ್ನುವುದು ನ್ಯಾಯಾದ ಬೇಡಿಕೆಯಾಗಿದೆ ಎಂದರು.ನಮ್ಮ ದೇಶದಲ್ಲಿ ನ್ಯಾಯ ದೊರಕುವುದು ಬಹಳ ವಿಳಂಬವಾಗಿದ್ದು, ಅತ್ಯಂತ ಶೀಘ್ರಗತಿಯಲ್ಲಿ ಪ್ರಕರಣಗಳು ಬಗೆಹರಿಯುವ ವ್ಯವಸ್ಥೆ ಬೇಕು ಎಂದರು.
ಅಣ್ಣ ಹಜಾರೆ ಟೀಮಿನಲ್ಲಿ ಗುರುತಿಸಿಕೊಂಡು ಜನಲೋಕಪಾಲಕ ಮಸೂದೆಗೆ ಆಗ್ರಹಿಸುತ್ತಿದ್ದ ನೀವು ಮೋದಿ ಅಧಿಕಾರಕ್ಕೆ ಬಂದನಂತರ ನಿಮ್ಮ ಹೋರಾಟದಿಂದ ಹಿಂದಕ್ಕೆ ಸರಿದ ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಧಿಕಾರದಲ್ಲಿರುವವರಿಗೆ ಇದು ಯಾವುದೂ ಬೇಡವಾಗಿದೆ ಎಂದಷ್ಟೆ ಉತ್ತರಿಸಿದರು.