×
Ad

ಸೋಲುವ ಭೀತಿಯಿಂದ ಕಲ್ಲಡ್ಕ ಭಟ್‌ರನ್ನು ಮುಸ್ಲಿಮರ ಮುಂದಿಟ್ಟು ರಮಾನಾಥ ರೈ ರಾಜಕಾರಣ: ವಿಟ್ಲ ಮುಹಮ್ಮದ್ ಕುಂಞಿ

Update: 2017-07-08 19:56 IST

ಮಂಗಳೂರು, ಜು.8: ಯಾರಿಗೂ ಬೇಡವಾಗಿ ಮೂಲೆಗುಂಪಾಗಿದ್ದ ಕಲ್ಲಡ್ಕ ಭಟ್‌ರನ್ನು ಗಣ್ಯ ವ್ಯಕ್ತಿಯಾಗಿಸಿದ್ದೇ ಸಚಿವ ರಮಾನಾಥ ರೈ. ಈ ರೈಗೆ ನಿಜಕ್ಕೂ ಜಿಲ್ಲೆಯಲ್ಲಿ ಶಾಂತಿ ಬೇಕಿಲ್ಲ. ಬಿಜೆಪಿಗರಂತೆ ಅವರಿಗೂ ಬೇಕಾಗಿರುವುದು ಓಟ್‌ಬ್ಯಾಂಕ್ ರಾಜಕೀಯ. ಸೋಲುವ ಭೀತಿಯಿಂದ ಅವರು ಕಲ್ಲಡ್ಕ ಭಟ್‌ರನ್ನು ಮುಸ್ಲಿಮರ ಮುಂದಿಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂದು ಜೆಡಿಎಸ್ ದ.ಕ. ಜಿಲ್ಲಾಧ್ಯಕ್ಷ ವಿಟ್ಲ ಮುಹಮ್ಮದ್ ಕುಂಞಿ ಆರೋಪ ಮಾಡಿದ್ದಾರೆ.

"ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 5 ಮಂದಿಯ ಕಾಂಗ್ರೆಸ್ ಶಾಸಕರಿದ್ದಾರೆ. ಇಬ್ಬರು ಸಚಿವರಿದ್ದಾರೆ. ಇವರು ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡಿ ಪ್ರಭಾವಿ ನಾಯಕರಾಗಿದ್ದಾರೆಯೇ ವಿನ: ಇವರಿಂದ ಏನೂ ಆಗುವುದಿಲ್ಲ. ಸಚಿವರಾದ ರಮಾನಾಥ ರೈ ಮತ್ತು ಯು.ಟಿ.ಖಾದರ್‌ಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಮೇಲೆ ಹಿಡಿತವಿಲ್ಲ. ಇವರು ಅಧಿಕಾರ ಚಲಾಯಿಸಲು ಅಸಮರ್ಥರಾಗಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಕಲ್ಲಡ್ಕ, ಬಿ.ಸಿ.ರೋಡ್‌ನಲ್ಲಿ ಅಹಿತಕರ ಘಟನೆ ನಡೆಯುತ್ತಿದ್ದರೂ ಪೊಲೀಸ್ ಇಲಾಖೆಯಿಂದ ಸರಿಯಾಗಿ ಕೆಲಸ ಮಾಡಿಸಿ ಶಾಂತಿ ನೆಲೆಸುವಂತೆ ಮಾಡಲು, ಕೋಮುಗಲಭೆಗೆ ಕಾರಣರಾಗುವವರ ವಿರುದ್ಧ ಕ್ರಮ ಕೈಗೊಳ್ಳಲು ಇವರಿಗೆ ಸಾಧ್ಯವಿಲ್ಲ. ಇಂತಹವರಿಗೆ ಸಚಿವರಾಗಿ ಮುಂದುವರಿಯಲು ನೈತಿಕ ಹಕ್ಕಿಲ್ಲ ಎಂದರು.

ಸೆ.144 ಮೂಲಕ ನಿಷೇಧಾಜ್ಞೆ ಹೇರಿದ ಬಳಿಕ ಪ್ರತಿಭಟನೆ ನಡೆಸಲು ಸಾಧ್ಯವಿಲ್ಲ. ಆದರೆ, ಬಿಜೆಪಿಯ ಸಂಸದರು, ಶಾಸಕರು, ಬಿಜೆಪಿಗರು, ಸಂಘಪರಿವಾರದ ಕಾರ್ಯಕರ್ತರು ಬಿ.ಸಿ.ರೋಡ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಕಾಂಗ್ರೆಸಿಗರೇ ಕಾರಣ. ಸಚಿವರ ಅಸಹಾಯಕತೆಯನ್ನು ಬಿಜೆಪಿಯವರು ಬಳಸಿಕೊಂಡಿದ್ದಾರೆ. ಈ ಹಿಂದೆ ಸೆ.144 ಹಾಕಿದ ಸಂದರ್ಭ ಪಿಎಫ್‌ಐ ಸಂಘಟನೆಯವರು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಕಚೇರಿಗೆ ಮುತ್ತಿಗೆ ಹಾಕಿದ್ದರು. ಆವಾಗ ಲಾಠಿಜಾರ್ಜ್ ಮಾಡಿದ್ದ ಪೊಲೀಸ್ ಇಲಾಖೆಗೆ ಶುಕ್ರವಾರ ಬಿ.ಸಿ.ರೋಡ್‌ನಲ್ಲಿ ಸಂಘಪರಿವಾರ, ಬಿಜೆಪಿಯವರ ಮೇಲೆ ಲಾಠಿಜಾರ್ಜ್ ಮಾಡಲು ಯಾಕೆ ಸಾಧ್ಯವಾಗಿಲ್ಲ?. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅಥವಾ ರಾಜ್ಯ ಆಹಾರ ಸಚಿವ ಯು.ಟಿ.ಖಾದರ್ ಅಡ್ಡಿಯಾಗಿದ್ದರೇ? ಎಂದು ವಿಟ್ಲ ಮುಹಮ್ಮದ್ ಕುಂಞಿ ಪ್ರಶ್ನಿಸಿದರು.

ಮುಖ್ಯಮಂತ್ರಿ ಬಂದಾಗಲೇ ಅಹಿತಕರ ಘಟನೆ ನಾಚಿಕೆಗೇಡು:

ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತಪ್ಪಿತಸ್ಥರ ವಿರುದ್ಧ ಕ್ರಮ ಎಂದು ಹೇಳಿಕೆ ಕೊಡುತ್ತಿದ್ದಾರೆ. ಆದರೆ, ಅವರದ್ದೂ ಕೂಡ ಬರೀ ಬಾಯಿಮಾತಿಗೆ ಸೀಮಿತವಾಗಿದೆ. ಗೃಹ ಖಾತೆ ಅವರ ಬಳಿ ಇದ್ದರೂ ಕೂಡ ಏನೂ ಪ್ರಯೋಜನವಿಲ್ಲ. ಶುಕ್ರವಾರ ಅವರು ದ.ಕ.ಜಿಲ್ಲೆಗೆ ಭೇಟಿ ನೀಡಿದಾಗಲೇ ಸೆ.144 ಉಲ್ಲಂಘಿಸಲಾಗಿದೆ. ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ಚೂರಿಯಿಂದ ಇರಿಯಲಾಗಿದೆ. ಕಟ್ಟುನಿಟ್ಟಿನ ಕ್ರಮ ಎಂದ ಬಳಿಕ ನಡೆದ ಈ ಘಟನೆಯು ಸ್ವತ: ಮುಖ್ಯಮಂತ್ರಿಗೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ವಿಟ್ಲ ಮುಹಮ್ಮದ್ ಕುಂಞಿ ತಿಳಿಸಿದ್ದಾರೆ.

ಹಲ್ಲೆಕೋರರು, ಕಲ್ಲೆಸೆಯುವವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳುವ ಬದಲು ಕೈ ಕಟ್ಟಿ ನಿಂತು ನೋಡುತ್ತಿದ್ದಾರೆ. ಇಷ್ಟೆಲ್ಲಾ ಘಟನೆಗೆ ಯಾರು ಕಾರಣ ಎಂದು ಸ್ಪಷ್ಟವಾಗಿದ್ದರೂ ಸಚಿವರು ಪಿತೂರಿದಾರರ ವಿರುದ್ಧ ಕ್ರಮಕ್ಕೆ ಆಗ್ರಹ ಎಂದು ಹೇಳುತ್ತಿದ್ದಾರೆಯೇ ವಿನ: ಕ್ರಮ ಜರಗಿಸಲು ಬೇಕಾದ ಕೆಲಸ ಮಾಡುತ್ತಿಲ್ಲ. ಹಾಡುಹಗಲೇ ಜನಪ್ರತಿನಿಧಿಯ ಕೊಲೆ, ಪಕ್ಷದ ಮುಖಂಡರ ಕೊಲೆ, ಸಂಘಟನೆಗಳ ಕಾರ್ಯಕರ್ತರ ಕೊಲೆಯಾದರೂ ಕೂಡ ಸಚಿವ ರಮಾನಾಥ ರೈ ಏನೂ ಆಗಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇದು ಉತ್ತರ ಪ್ರದೇಶದಲ್ಲಿ ನಡೆಯುತ್ತಿಲ್ಲ. ಸಚಿವರ ಕ್ಷೇತ್ರದಲ್ಲೇ ನಡೆಯುತ್ತಿದೆ. ಆದರೂ ಅವರು ಮೌನ ತಾಳಿದ್ದಾರೆ. ಇದು ಅವರ ವೈಫಲ್ಯ, ಅಸಹಾಯಕತೆಗೆ ಸಾಕ್ಷಿಯಾಗಿದೆ ಎಂದು ವಿಟ್ಲ ಮುಹಮ್ಮದ್ ಕುಂಞಿ ಹೇಳಿದರು.

ಕುಮಾರಸ್ವಾಮಿಯಿಂದ ಪಾದಯಾತ್ರೆ
ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದರೂ ಕೂಡ ಅಶಾಂತಿ ಸೃಷ್ಟಿಯಾಗಿದೆ. ಅಮಾಯಕರು ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಹಾಗು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮತ್ತು ರಾಜ್ಯ ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್ ಸಹಿತ ಎಲ್ಲ ಪ್ರಮುಖ ನಾಯಕರ ಜೊತೆ ಚರ್ಚೆ ಮಾಡಲಾಗಿದೆ. 

ಜನರು ಮತ ನೀಡಲಿ, ಬಿಡಲಿ. ದ.ಕ.ಜಿಲ್ಲೆಯಲ್ಲಿ ಶಾಂತಿ ನೆಲೆಸಬೇಕು. ಅದಕ್ಕಾಗಿ ತಾನು ಪಾದಯಾತ್ರೆ ಮಾಡುವೆ ಎಂದು ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಎಡಪಕ್ಷಗಳು ಹಾಗು ಇತರ ಜಾತ್ಯತೀತ ಪಕ್ಷಗಳು, ಸಂಘಟನೆಗಳ ಮುಖಂಡರ ಜೊತೆ ಸಮಾಲೋಚನೆ ಮಾಡಿ ವಾರದೊಳಗೆ ದ.ಕ. ಜಿಲ್ಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಪಾದಯಾತ್ರೆ ನಡೆಸಲಿದ್ದಾರೆ. 

ಆ ಮೂಲಕ ಅಮಾಯಕರ ಜೀವದ ಜೊತೆ ಚೆಲ್ಲಾಟವಾಡುವ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವುದಾಗಿ ವಿಟ್ಲ ಮುಹಮ್ಮದ್ ಕುಂಞಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News